ರಾಮನಗರ : ಅದೇನೋ ನುಡಿದಂತೆ ನಡೆದಿದ್ದೇವೆ ಅಂತಾರೆ. ಇಲ್ಲಿ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆಯೇ ಇಲ್ಲ. ಮಕ್ಕಳ ಭವಿಷ್ಯದ ಬಸ್ಸು ಎಲ್ಲಿದೆ? ಈ ಸರ್ಕಾರ ನುಡಿದಂತೆ ನಡೆದಿರೋದಾ? ಮಕ್ಕಳು ಜೆಸಿಬಿಯಲ್ಲಿ ಶಾಲೆಗೆ ಹೋಗ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಮನಗರ ತಾಲೂಕಿನ ದಾಸೇಗೌಡನದೊಡ್ಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಿತ್ಯ ಕಲರ್ ಫುಲ್ ಫೋಟೋ ಹಾಕಿಕೊಂಡು ಫೋಸ್ ಕೊಡ್ತಾರೆ. ಸರ್ಕಾರದ ಅಕ್ರಮಗಳ ಪ್ರಶ್ನೆ ಮಾಡಿದ್ರೆ ನನ್ನ ವಿರುದ್ಧ ಪೋಸ್ಟರ್ ಹಾಕ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬರ ಪರಿಹಾರ ಬಿಡುಗಡೆಯಾಗದ ವಿಚಾರ ಕುರಿತು ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಖಾತೆಯಲ್ಲಿ 800 ಕೋಟಿ ರೂಪಾಯಿ ಇಟ್ಟಿದ್ದೇವೆ ಅಂತಾರೆ. ರೈತರಿಗೆ ಪರಿಹಾರ ನೀಡದೇ ಯಾವ ಉದ್ದೇಶಕ್ಕೆ ಹಣ ಇಟ್ಟಿದ್ದೀರಿ? ಸರ್ಕಾರದ ಮಾಹಿತಿ ಪ್ರಕಾರವೇ 33 ಸಾವಿರ ಕೋಟಿ ರೈತರ ಬೆಳೆ ನಷ್ಟ ಆಗಿದೆ. ದೀಪಾವಳಿ ವೇಳೆ ಕೆಲವು ಕಡೆ ಮಳೆ ಆಗಿದೆ. ಆದರೆ, ಬಹುತೇಕ ಕಡೆ ಮೇವಿನ ಕೊರತೆ ಇದೆ ಎಂದು ಹೇಳಿದ್ದಾರೆ.
ಖಾಸಗಿ ಕಂಪೆನಿಗಳಿಗೆ ಹೆಚ್ಚು ಲಾಭ ಆಗ್ತಿದೆ
ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಫಸಲು ಹಾಳಾಗಿದೆ. ಹಿಂದೆ ಬೇರೆ ದೇಶಗಳಿಗೆ ಆಹಾರ ಪದಾರ್ಥ ರಫ್ತು ಮಾಡುತ್ತಿದ್ದೆವು. ಈಗ ನಮ್ಮಲ್ಲೇ ಆಹಾರದ ಕೊರತೆ ಉಂಟಾಗುತ್ತಿದೆ. ಫಸಲ್ ಭೀಮಾ ಯೋಜನೆ ಅಡಿ ರೈತರಿಗೆ ಪರಿಹಾರ ಕೊಡುವುದಕ್ಕಿಂತ ಹೆಚ್ಚಾಗಿ ಖಾಸಗಿ ಕಂಪೆನಿಗಳಿಗೆ ಹೆಚ್ಚಿನ ಲಾಭ ಆಗುತ್ತಿದೆ. ಬೆಳೆ ಪರಿಹಾರದ ನಷ್ಟವನ್ನು ಇಲ್ಲಿವರೆಗೂ ಸರ್ಕಾರ ಕೊಟ್ಟಿಲ್ಲ ಎಂದು ಹರಿಹಾಯ್ದಿದ್ದಾರೆ.