ಬೆಂಗಳೂರು : ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡುತ್ತೇನೆ. ಅವರ ಬಳಿಯೂ ಮಾತನಾಡುತ್ತೇನೆ, ಅವರು ಸೋತ ಬಳಿಕ ಬೇಸರದಿಂದ ಇದ್ದಾರೆ. ಸೋಮಣ್ಣ ನನ್ನ ಸಹೋದರನಂತೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿ. ಸೋಮಣ್ಣ ಸೇರಿದಂತೆ ಅನೇಕರನ್ನು ನಾನು ಸಂಪರ್ಕ ಮಾಡಿದ್ದೇನೆ. ಎಲ್ಲರೂ ನನ್ನ ಆಯ್ಕೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಅವರು ಮೊದಲಿನಿಂದಲೂ ಚೆನ್ನಾಗಿದ್ದೇವೆ. ಅವರನ್ನು ಭೇಟಿ ಮಾಡುತ್ತೇನೆ, ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.
ನಾಳೆಯಿಂದಲೇ ರಾಜ್ಯ ಪ್ರವಾಸ ಮಾಡಲು ಚಿಂತನೆ ನಡೆಸಿದ್ದೇನೆ. ಈಗಾಗಲೇ ಬೆಳಗ್ಗೆಯಿಂದಲೇ ನಾನು ರಾಜ್ಯದ 15 ರಿಂದ 20 ಮಂದಿ ಬಿಜೆಪಿ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದ್ದೇನೆ. ಎಲ್ಲರೂ ಕೂಡ ಈಗ ಬರಲಿರುವ ಅಧಿವೇಶನಕ್ಕೆ ಬರಗಾಲಕ್ಕೆ ಆದತ್ಯೆ ನೀಡುತ್ತೇವೆ. ಬರಗಾಲದ ಬಗ್ಗೆಯೇ ಚರ್ಚೆ ಮಾಡುತ್ತೇವೆ. ಈಗಾಗಲೇ ಸರ್ಕಾರ ಐದಾರು ವಿಚಾರಗಳನ್ನು ನಮ್ಮ ಕೈಗೆ ಕೊಟ್ಟಿದ್ದಾರೆ ಎಂದು ಹೇಳಿದರು.
ಸರ್ಕಾರದ ಕಿವಿ ಹಿಂಡಿಯುವ ಕೆಲಸ ಮಾಡ್ತೀವಿ
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿವಿ ಹಿಂಡಿಯುವ ಕೆಲಸ ಮಾಡುತ್ತೇವೆ. ಇದರ ಜೊತೆಗೆ ನಾನು ರಾಜ್ಯ ಸರ್ಕಾರದಲ್ಲಿ ಅನೇಕ ಖಾತೆಯನ್ನು ನಿಭಾಯಿಸಿದ್ದೇನೆ. ಉಪ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಅದೇ ಬೇರೆ, ಈ ಹುದ್ದೆಯೇ ಬೇರೆ. ಇದೊಂದು ಹೊಸ ಹುದ್ದೆ, ಇದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಆರ್. ಅಶೋಕ್ ತಿಳಿಸಿದರು.