Monday, November 4, 2024

ವಿಶ್ವಕಪ್ ಟ್ರೋಫಿ ಮೇಲೆ ಭಾರತೀಯರ ಕಣ್ಣು : ‘ನಮೋ’ ಸ್ಟೇಡಿಯಂನಲ್ಲಿ ‘ಮದಗಜ’ಗಳ ಕಾದಾಟ

ಬೆಂಗಳೂರು : ಭಾರತ ಕಳೆದ 10 ವರ್ಷಗಳಿಂದ ಐಸಿಸಿ ಟ್ರೋಫಿಗಾಗಿ ಪರಿತಪಿಸುತ್ತಿದೆ. ಇದೀಗ ಆ ಕನಸು ಈಡೇರುವ ಸಮಯ ಹತ್ತಿರವಾಗಿದೆ. ನಾಳೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಕಾದಾಡಲು ಸಿದ್ಧವಾಗಿವೆ.

ಇಡೀ ಟೂರ್ನಿಯಲ್ಲಿ ಸೋಲರಿಯದ ಭಾರತ, ವಿಶ್ವಕಪ್‌ ಮುಡಿಗೇರಿಸಲು ಕೇವಲ ಒಂದೇ ಗೆಲುವಿನ ಮೆಟ್ಟಿಲು ದಾಟಬೇಕಿದೆ. ಅಹ್ಮದಾಬಾದ್‌ನ ನಮೋ ಸ್ಟೇಡಿಯಂನಲ್ಲಿ ಮದಗಜಗಳ ಹೋರಾಟ ನಡೆಯಲಿದ್ದು, ಕ್ರಿಕೆಟ್ ಜಗತ್ತು ಈ ಪಂದ್ಯದ ಮೇಲೆ ಚಿತ್ತ ನೆಟ್ಟಿದೆ.

ಈ ಟೂರ್ನಿಯಲ್ಲಿ ಭಾರತ ಆಡಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್‌ಗೆ ಬಂದಿದೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಗೆಲುವು ಸಾಧಿಸಿ ಪೈನಲ್‌ ಪ್ರವೇಶಿಸಿದೆ. ಇತ್ತ, ಆಸ್ಟ್ರೇಲಿಯಾ ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿದ್ದು ಬಿಟ್ಟರೆ ಇನ್ನುಳಿದ 7 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನು ಸೆಮಿಫೈನಲ್‌-2ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದೆ.

ಸೇಡು ತೀರಿಸಿಕೊಳ್ಳಲು ತವಕ

ಬರೋಬ್ಬರಿ 20 ವರ್ಷಗಳ ಬಳಿಕ ಭಾರತ ಹಾಗೂ ಆಸಿಸ್ ವಿಶ್ವಕಪ್‌ ಫೈನಲ್‌ನಲ್ಲಿ ಸೆಣಸುತ್ತಿವೆ. 2003ರಲ್ಲಿ ಭಾರತ ಹಾಗೂ ಆಸೀಸ್‌ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿ, ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.

ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ

ಭಾರತ ಈ ಬಾರಿ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿದೆ. ಪ್ರಸ್ತುತ ಭಾರತ ತಂಡ ಎಲ್ಲಾ ವಿಭಾಗಗಳಲ್ಲಿಯೂ ಅತ್ಯಂತ ಬಲಿಷ್ಠವಾಗಿದೆ. ಬ್ಯಾಟಿಂಗ್‌ನಲ್ಲಿ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌ ರಾಹುಲ್‌ ಸೂಪರ್ ಫಾರ್ಮ್‌ನಲ್ಲಿದ್ದಾರೆ.

ಭಾರತದ ಬ್ಯಾಟಿಂಗ್ ಬಲ

ವಿರಾಟ್‌ ಕೊಹ್ಲಿ : 711 ರನ್

ರೋಹಿತ್‌ ಶರ್ಮಾ : 550 ರನ್‌

ಶ್ರೇಯಸ್‌ ಅಯ್ಯರ್‌ : 526 ರನ್‌

ಕೆ.ಎಲ್‌ ರಾಹುಲ್ : 386 ರನ್

ಶುಭಮನ್ ಗಿಲ್‌ : 346 ರನ್

ಇನ್ನು ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ಮೊಹಮ್ಮದ್ ಸಿರಾಜ್‌ ಬೊಂಬಾಟ್ ಫಾರ್ಮ್​ನಲ್ಲಿದ್ದಾರೆ. ಶಮಿ ಭಾರತದ ಟ್ರಂಪ್ ಕಾರ್ಡ್. ಈವರೆಗೆ ಶಮಿ 23 ವಿಕೆಟ್ ಕಬಳಿಸಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಂಡಿದ್ದಾರೆ.

ಒಟ್ಟಾರೆ, ಭಾರತ ಹಾಗೂ ಆಸಿಸ್ ನಡುವಣ ಫೈನಲ್ ಪಂದ್ಯ ವೀಕ್ಷಿಸಲು ಇಡೀ ಜಗತ್ತೇ ಜಾತಕ ಪಕ್ಷಿಯಂತೆ ಕಾಯುತ್ತಿದೆ. ಭಾರತ ಆರಂಭದಿಂದಲೇ ಅಬ್ಬರದ ಪ್ರದರ್ಶನ ನೀಡುತ್ತಾ ಬಂದಿದ್ದು, ಅದೇ ರೀತಿಯ ಪ್ರದರ್ಶನವನ್ನು ಫೈನಲ್ ಪಂದ್ಯದಲ್ಲಿಯೂ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES