Monday, December 23, 2024

ವಿಪಕ್ಷ ನಾಯಕನಾದ ಬಳಿಕ ಕಾಂಗ್ರೆಸ್ ವಿರುದ್ಧ ಬೆಂಕಿಯುಗುಳಿದ ಆರ್. ಅಶೋಕ್

ಬೆಂಗಳೂರು : ವಿಧಾನಸಭಾ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಆರ್. ಅಶೋಕ್ ಅವರು ಕಾಂಗ್ರೆಸ್​ ವಿರುದ್ಧ ಬೆಂಕಿಯುಗುಳಿದ್ದಾರೆ.

ನೂತನ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಅವರು, ನನ್ನ ನೇತೃತ್ವದಲ್ಲಿ ರಾಜ್ಯದ ಜನತೆ, ಬಡವರ ಧ್ವನಿಯಾಗಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಉತ್ತರ ನೀಡಲಿದ್ದೇವೆ ಎಂದು ಹೇಳಿದರು.

ನಾವು (ಬಿಜೆಪಿ) 66 ಜನ ಹಾಗೂ ಜೆಡಿಎಸ್​ನ 19 ಮಂದಿ ಸೇರಿ 85 ಶಾಸಕರು ಇದ್ದೇವೆ. ನಮ್ಮದು ದೊಡ್ಡ ವಿರೋಧ ಪಕ್ಷ. ನನ್ನದು ಒಂದೇ ಸಿದ್ಧಾಂತ. ಸಿದ್ದರಾಮಯ್ಯ ಅವರದು ಜೆಡಿಎಸ್​ ಪಕ್ಷದಲ್ಲಿದ್ದಾಗ ಒಂದು ಸಿದ್ಧಾಂತ, ಕಾಂಗ್ರೆಸ್​ನಲ್ಲಿದ್ದಾಗ ಒಂದು ಸಿದ್ಧಾಂತ ಹಾಗು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಒಂದು ಸಿದ್ಧಾಂತ. ಆದರೆ, ನಾನು ತರಗೆಲೆಯಲ್ಲ, ಗಟ್ಟಿ ಕಮಲ ಎಂದು ಸಿಎಂ ಸಿದ್ದರಾಮಯ್ಯಗೆ ಟಕ್ಕರ ಕೊಟ್ಟರು.

ಕಾಂಗ್ರೆಸ್​ ರೈತರಿಗೆ ಮೋಸ ಮಾಡ್ತಿದೆ

ಸರ್ಕಾರದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ. ಕಾಂಗ್ರೆಸ್​ ಪಕ್ಷದ ಭ್ರಷ್ಟಾಚಾರವನ್ನು ನಾವು ಬಯಲಿಗೆಳೆಯುತ್ತೇವೆ. ಕಾಂಗ್ರೆಸ್​ ಕೊಟ್ಟ ಭರವಸೆಗಳನ್ನ ಈಡೇರಿಸಿಲ್ಲ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಕಾಂಗ್ರೆಸ್​ ಸರ್ಕಾರ ರೈತರಿಗೆ ಮೋಸ ಮಾಡ್ತಿದೆ. ನಮ್ಮ ಶಾಸಕರಿಗೆ ಅನುದಾನ ನೀಡುತ್ತಿಲ್ಲ, ಅನುದಾನ ನಿಲ್ಲಿಸಿ ಗ್ಯಾರಂಟಿಗಳಿಗೆ ನೀಡ್ತಿದ್ದಾರೆ. ಕಾಂಗ್ರೆಸ್​​ನಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸ್ತಿದ್ದಾರೆ. ರಾಜ್ಯದ ಜನರಿಗೆ, ಬಡವರಿಗೆ ಸಿಗಬೇಕಾದ ನ್ಯಾಯಕ್ಕಾಗಿ ನಾನು ಹೋರಾಟ ಮಾಡುತ್ತೇನೆ ಎಂದು ಗುಡುಗಿದರು.

ಒಂದೇ ಸಿದ್ಧಾಂತದಡಿ 7 ಬಾರಿ ಗೆದ್ದಿದ್ದೇನೆ

ನನ್ನನ್ನು ವಿಪಕ್ಷ ನಾಯಕನಾಗಿ ಆಯ್ಕೆ ಮಾಡಿದ ವರಿಷ್ಠರಿಗೆ ಧನ್ಯವಾದ ತಿಳಿಸುತ್ತೇನೆ. ತುರ್ತುಪರಿಸ್ಥಿತಿ ವೇಳೆ ಹೋರಾಟ ಮಾಡಿ ಒಂದು ತಿಂಗಳು ಜೈಲಿಗೆ ಹೋಗಿದ್ದೆ. 20 ವರ್ಷಗಳ ಕಾಲ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ಎಲ್ಲವನ್ನೂ ಪರಿಗಣನೆ ಮಾಡಿ ನನಗೆ ವಿಪಕ್ಷ ನಾಯಕ ಸ್ಥಾನ ನೀಡಿದ್ದಾರೆ. ಉತ್ತರಹಳ್ಳಿ, ಪದ್ಮನಾಭನಗರ ಕ್ಷೇತ್ರದ ಜನ 7 ಬಾರಿ ಆಯ್ಕೆ ಮಾಡಿದ್ದಾರೆ. ಒಂದೇ ಪಕ್ಷ, ಒಂದೇ ಚಿಹ್ನೆ, ಒಂದೇ ಸಿದ್ಧಾಂತದಡಿ 7 ಬಾರಿ ಗೆದ್ದಿದ್ದೇನೆ. ಆರಂಭದಿಂದಲೂ ಸಂಘ ಪರಿವಾರದಲ್ಲಿ ಕೆಲಸ ಮಾಡಿದ್ದೇವೆ ಎಂದು ತಾನು ನಡೆದುಬಂದ ಹಾದಿಯನ್ನು ಆರ್​. ಅಶೋಕ್ ಸ್ಮರಿಸಿದರು.

RELATED ARTICLES

Related Articles

TRENDING ARTICLES