ಉತ್ತರ ಕನ್ನಡ : ಬಿಜೆಪಿಗರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರನ್ನೇ ಬಿಟ್ಟಿಲ್ಲ, ಇನ್ನು ಅವರ ಮಗನನ್ನ ಬಿಡ್ತಾರಾ? ಎಂದು ಮೀನುಗಾರಿಕಾ ಹಾಗೂ ಬಂದರು ಸಚಿವ ಮಂಕಾಳ ವೈದ್ಯ ಕುಟುಕಿದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಡಿಯೂರಪ್ಪನವರನ್ನ ಸಿಎಂ ಆದಾಗಲೇ ಇಳಿಸಿದ್ದರು. ವಿಜಯೇಂದ್ರರನ್ನ ರಾಜ್ಯಾಧ್ಯಕ್ಷ ಮಾಡಿದ್ದಾರೆ, ಶೀಘ್ರದಲ್ಲೇ ಆ ಸ್ಥಾನದಿಂದ ಇಳಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಅವರ ಪಕ್ಷದ ನಾಯಕರೇ ಅಧ್ಯಕ್ಷ ಹುದ್ದೆ ನೇಮಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಮಾಡುವ ಕೆಲಸವನ್ನ ಅವರ ಪಕ್ಷದ ನಾಯಕರೇ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ಬಿಜೆಪಿಗರು ಹೇಳುತ್ತಾರೆ. ಕಳೆದ ಬಾರಿ ಮಿಸ್ ಆಗಿ 27 ಸ್ಥಾನದಲ್ಲಿ ಬಿಜೆಪಿಗರು ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್ 28 ಸ್ಥಾನದಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
JDS ಜೊತೆ ಮೈತ್ರಿಯಿಂದ ಹಿನ್ನಡೆಯಾಗಿತ್ತು
ನಮ್ಮಲ್ಲಿ 136 ಶಾಸಕರು ಇದ್ದಾರೆ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ. ಕಳೆದ ಬಾರಿ ಜೆಡಿಎಸ್ ಜೊತೆ ಮೈತ್ರಿಯಿಂದ ಹಿನ್ನಡೆಯಾಗಿತ್ತು. ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಬಿಜೆಪಿಗರು ಚುನಾವಣೆಯಲ್ಲಿ ಹಿನ್ನಡೆಯನ್ನ ಅನುಭವಿಸುತ್ತಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟೀಕೆ ಮಾಡೋದೆ ಕೆಲಸ. ಟೀಕೆ ಮಾಡುವುದನ್ನ ಬಿಟ್ಟು ಬೇರೆ ಏನು ಮಾಡುವುದಿಲ್ಲ. ಕರೆಂಟ್ ಕದ್ದ ಪ್ರಕರಣದಲ್ಲಿ ಯಾವುದೇ ಮುಲಾಜಿಲ್ಲದೇ ನಾವು ಎಫ್.ಐ.ಆರ್ ಮಾಡಿದ್ದೇವೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.