Sunday, December 22, 2024

ಕರ್ನಾಟಕ ಪಬ್ಲಿಕ್ ಎಗ್ಸಾಮಿನೇಷನ್ ವಿಧೇಯಕ-2023 ಮುಂದಿನ ಅಧಿವೇಶನದಲ್ಲಿ ಮಂಡನೆ: ಸಿದ್ದರಾಮಯ್ಯ

ಬೆಂಗಳೂರು : ಸಾರ್ವತ್ರಿಕ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟಲು ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಹೊಸ ಮಸೂದೆಯನ್ನು ಜಾರಿಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಕರ್ನಾಟಕ ಪಬ್ಲಿಕ್‌ ಎಗ್ಸಾಮಿನೇಷನ್‌ (ಭ್ರಷ್ಟಾಚಾರ ಮತ್ತು ಅಕ್ರಮ ವಿಧಾನಗಳ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ-2023ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆ, ಎಫ್.ಡಿ.ಎ ಸೇರಿದಂತೆ ಸರ್ಕಾರದ ಹಲವು ನೇಮಕಾತಿಗಳಲ್ಲಿ ವ್ಯಾಪಕವಾಗಿ ಅಕ್ರಮಗಳು ನಡೆದಿದ್ದವು. ಇದರಿಂದ ವರ್ಷಾನುಗಟ್ಟಲೆಯಿಂದ ಪರೀಕ್ಷೆಗೆ ತಯಾರಿ ನಡೆಸಿ, ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿದ್ದ ಸಾವಿರಾರು ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರಾಗಿದ್ದರು ಎಂದು ತಿಳಿಸಿದ್ದಾರೆ.

ಅರ್ಹರಿಗೆ ಮಾತ್ರ ಉದ್ಯೋಗ ಸಿಗಬೇಕು

ಇಂತಹ ಅಕ್ರಮ, ಅವ್ಯವಹಾರವನ್ನು ತಡೆಗಡ್ಡಿ, ಅರ್ಹರಿಗೆ ಸರ್ಕಾರಿ ಉದ್ಯೋಗಗಳು ದೊರಕುವಂತೆ ಮಾಡಲು ಕಟ್ಟುನಿಟ್ಟಿನ ಪರೀಕ್ಷಾ ವಿಧಾನ, ಪಾರದರ್ಶಕ ನೇಮಕಾತಿ ಪ್ರಕ್ರಿಯೆಯ ಅಳವಡಿಕೆ ಮಾಡಲು ನೂತನ ಮಸೂದೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದೇವೆ. ಇದರ ಮೊದಲ ಹಂತವಾಗಿ ವಿಧೇಯಕವನ್ನು ಸಚಿವ ಸಂಪುಟದ ಮುಂದಿಟ್ಟು ಅನುಮೋದನೆಯನ್ನು ಪಡೆದಿದ್ದೇವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಷ್ಟೇ ಅಲ್ಲ, ಅರ್ಹರಿಗೆ ಮಾತ್ರ ಉದ್ಯೋಗ ಸಿಗಬೇಕು ಎಂಬುದೂ ನಮ್ಮ ಆದ್ಯತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

RELATED ARTICLES

Related Articles

TRENDING ARTICLES