ಬೆಂಗಳೂರು: ವಿಪಕ್ಷನ ಆಯ್ಕೆಯ ವಿಚಾರದಲ್ಲಿ ವರಿಷ್ಠರು ಚೇಲಾಗಳ ಮಾತು ಕೇಳಬಾರದು ಎಂದು ಬಿಜೆಪಿ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್ ಬಹಿರಂಗವಾಗಿಯೇ ಸಿಡಿದೆದ್ದಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್, ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆ, ಚುನಾವಣೆಯಲ್ಲಿ ಯಾರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಒಂದು ವರ್ಗದ ಕೇಂದ್ರೀಕೃತವಾಗಿ ಮಾಡಿದ್ದರು ಎಂದು ವಿವರಿಸಿದ್ದೇನೆ. ಅವರಿಗೆ ಎಷ್ಟೋ ವಿಷಯ ಗೊತ್ತಿರಲಿಲ್ಲ, ನಾನು ಧೈರ್ಯದಿಂದ ಎಲ್ಲವನ್ನೂ ಹೇಳಿದ್ದೇನೆ ಎಂದರು.
ನಾವು ಈ ದೇಶದಲ್ಲಿ ಉಳಿಯಬೇಕಾದರೆ ಮೋದಿ ಮತ್ತೆ ಪ್ರಧಾನಿ ಆಗಬೇಕು. ವರಿಷ್ಠರು ಕೆಲವೇ ಚೇಲಾಗಳ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳಬಾರದು, ಕೆಲವರು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನ ಮಾಡುತ್ತಾರೆ, ನಾನು ಅಂಜಲ್ಲ ಎಂದು ಹೇಳಿದ್ದೇನೆ. ಇಬ್ಬರೂ ಬಹಳ ಖುಷಿಯಾದರು ಎಂದು ಹೇಳಿದರು.
ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪಕ್ಷದೊಳಗೆ ಅಸಮಾಧಾನ ಉಂಟಾಗಿರುವ ಹಿನ್ನೆಲೆ ಇಂದು ಸಂಜೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಆಗಮಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಅವರನ್ನ ಬಸನ ಗೌಡ ಪಾಟೀಲ ಯತ್ನಾಳ್ ಇಂದು ಭೇಟಿ ಮಾಡಿ ಉತ್ತರ ಕರ್ನಾಟಕ್ಕೆ ವಿಪಕ್ಷನ ಸ್ಥಾನ ನೀಡಿ ಎಂದು ಪಟ್ಟು ಹಿಡಿದಿದ್ದಾರೆ.