ಬೆಂಗಳೂರು : ದೀಪಾವಳಿ ಸಂಭ್ರಮದಲ್ಲಿರುವ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಲು ಮುಂದಾಗಿದೆ.
ಬಹು ದಿನಗಳ ಬೇಡಿಕೆಯಾದ ನೂತನ ಪಿಂಚಣಿ ಯೋಜನೆ(NPS)ಯನ್ನು ಡಿಸೆಂಬರ್ ತಿಂಗಳಲ್ಲಿ ರದ್ದು ಮಾಡುವ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಸರ್ಕಾರ ಸಂಪನ್ಮೂಲಗಳ ಕ್ರೂಢೀಕರಣ ಮಾಡುತ್ತಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಒಟ್ಟು 2,65,715 ನೌಕರರು ನೂತನ ಪಿಂಚಣಿ ಯೋಜನೆಗೆ ಒಳಪಟ್ಟಿದ್ದಾರೆ. NPS ರದ್ದಾದರೆ ನೌಕರರು ನಿರಾಳರಾಗಲಿದ್ದಾರೆ. ರಾಜಸ್ಥಾನ, ಛತ್ತೀಸಘಡ, ಹಿಮಾಚಲ ಪ್ರದೇಶ, ಜಾರ್ಖಂಡ್ ರಾಜ್ಯದಲ್ಲಿ ಈಗಾಗಲೇ NPS ಅನ್ನು ರದ್ದುಗೊಳಿಸಲಾಗಿದೆ. ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡರೆ ಈ ರಾಜ್ಯಗಳ ಸಾಲಿಗೆ ಕರ್ನಾಟಕ ಸೇರ್ಪಡೆಯಾಗಲಿದೆ.
ಭರವಸೆ ಈಡೇರಿಸುತ್ತಾರಾ ಸಿಎಂ?
2006ರ ಏಪ್ರಿಲ್ 1ರ ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ಜಾರಿಗೊಳಿಸಿರುವ ನೂತನ ಪಿಂಚಣಿ ಯೋಜನೆ (ಎನ್.ಪಿ.ಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಭರವಸೆ ಈಡೇರಿಸಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.