ಬೆಂಗಳೂರು : ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ 160 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.
ಭಾರತ ನೀಡಿದ್ದ 411 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ನೆದರ್ಲೆಂಡ್ಸ್ 47.5 ಓವರ್ಗಳಲ್ಲಿ 250 ರನ್ ಗಳಿಸಿ ಆಲೌಟ್ ಆಯಿತು. ಈ ಸೋಲಿನ ಮೂಲಕ ಡಚ್ಚರು ವಿಶ್ವಕಪ್-2023 ಅಭಿಯಾನವನ್ನು ಅಂತ್ಯಗೊಳಿಸಿದರು.
ನೆದರ್ಲೆಂಡ್ಸ್ ಪರ ನಿಡಮನೂರು 54, ಎಂಗಲ್ಬ್ರೆಕ್ಟ್ 45, ಅಕ್ಕರ್ಮನ್ 35, ಮ್ಯಾಕ್ಸ್ ಓಡೌಡ್ 30 ರನ್ ಗಳಿಸಿದರು. ಭಾರತದ ಪರ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿದರು. ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಲಾ ಒಂದು ವಿಕೆಟ್ ಪಡೆದು ಗಮನಸೆಳೆದರು.
ಇನ್ನೂ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಕಲೆಹಾಕಿತು. ಭಾರತದ ಪರ ಶ್ರೇಯಸ್ ಅಜೇಯ 128, ಕೆ.ಎಲ್ ರಾಹುಲ್ 102, ರೋಹಿತ್ ಶರ್ಮಾ 61, ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ 51 ರನ್ ಗಳಿಸಿದರು. ನೆದರ್ಲೆಂಡ್ಸ್ ಪರ ಲೀಡೆ 2, ಮೀಕೆರನ್, ಮೆರ್ವೆ ತಲಾ ಒಂದು ವಿಕೆಟ್ ಪಡೆದರು.