ದಾವಣಗೆರೆ : ಬಿ.ವೈ. ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿರುವುದಕ್ಕೆ ಹಿರಿಯ ನಾಯಕರು ಅಸಮಾಧಾನಗೊಂಡಿರುವ ಬಗ್ಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಕೂಡ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ, ಅಧಿಕಾರ ಸಿಕ್ಕಿಲ್ಲ. ಹಾಗಂತ ನಾನು ಬೇಜಾರು ಆಗಿಲ್ಲ. ಅಧಿಕಾರ ಮುಖ್ಯವಲ್ಲ, ಅಧಿಕಾರ ನೀರಿನ ಮೇಲೆ ಗುಳ್ಳೆ ತರ ಎಂದು ಹೇಳಿದ್ದಾರೆ.
ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇರುತ್ತದೆ, ಎಲ್ಲವೂ ಸರಿಯಾಗಲಿದೆ. ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜೊತೆ ರಾಜ್ಯ ಪ್ರವಾಸ ಮಾಡುತ್ತೇನೆ. ನಿದ್ದೆ ಮಾಡದಂತೆ 28 ಕ್ಷೇತ್ರದಲ್ಲಿ ಓಡಾಡಿ ಕೆಲಸ ಮಾಡುತ್ತೇವೆ. ಒಟ್ಟಾಗಿ, ಒಂದಾಗಿ ಬಿಜೆಪಿ ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಖರ್ಗೆ ಮಗ ಅಂತಾ ಸಚಿವ ಮಾಡಿದ್ದಾರೆ
ಕುಟುಂಬ ರಾಜಕಾರಣ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಮಾತನಾಡಲು ಪ್ರಿಯಾಂಕ್ ಖರ್ಗೆಗೆ ನೈತಿಕತೆ ಇಲ್ಲ. ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ. ನೆಹರೂವಿನಿಂದ ಹಿಡಿದು ವಾದ್ರಾ ತನಕ ಕುಟುಂಬ ರಾಜಕಾರಣ ಇದೆ. ನಿಮಗೆ ಮಲ್ಲಿಕಾರ್ಜುನ ಖರ್ಗೆ ಮಗ ಅಂತಾ ಸಚಿವ ಸ್ಥಾನ ನೀಡಿದ್ದಾರೆ. ಗುಂಡೂರಾವ್ ಮಗ ಅಂತಾ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಆರೋಪಿಸುವ ನೈತಿಕ ಹಕ್ಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾನು ದಾವಣಗೆರೆ ಪ್ರಬಲ ಟಿಕೆಟ್ ಆಕಾಂಕ್ಷಿ
ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಪಿ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ನಾನು ದಾವಣಗೆರೆ ಪ್ರಬಲ ಟಿಕೆಟ್ ಆಕಾಂಕ್ಷಿ. ಸಂಸದ ಜಿ.ಎಂ ಸಿದ್ದೇಶ್ವರ್ ಅವರಿಗೆ ಟಿಕೆಟ್ ಸಿಕ್ಕರೆ ಕಾದು ನೋಡುವೆ. ಕೂಸು ಹುಟ್ಟುವ ಮುನ್ನ ಕುಲಾವಿ ಹೊಲೆಸಲ್ಲ. ಮುಂದೆ ಏನಾಗುತ್ತೋ ಕಾದು ನೋಡೋಣ ಎಂದು ರೇಣುಕಾಚಾರ್ಯ ಹೇಳಿದ್ದಾರೆ.