ಬೆಂಗಳೂರು : ಶೀಘ್ರದಲ್ಲಿಯೇ 484 ಕೋಟಿ ವೆಚ್ಚದಲ್ಲಿ ರಾಜ್ಯದ 167 ಯೋಜನೆಗಳಿಗೆ ಅನುಮೋದನೆ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ಅಂದಾಜು 484 ಕೋಟಿ ವೆಚ್ಚದ 167 ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ವಿನಂತಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಯೋಜನೆಗಳು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬರಲಿದೆ. ಈ ಯೋಜನೆಯ ಉದ್ದೇಶ ಕೃಷಿ ಭೂಮಿಯ ಮಟ್ಟದಲ್ಲಿ ನೀರಾವರಿಗಾಗಿ ತಗಲುವ ವೆಚ್ಚವನ್ನು ಸರಳೀಕರಿಸುವುದು, ಕನಿಷ್ಠಗೊಳಿಸುವುದು. ಹೆಚ್ಚಿನ ಕೃಷಿ ಭೂಮಿಯನ್ನು ನೀರಾವರಿ ವಿಧಾನಗಳಿಗೆ ಒಳಪಡುವಂತೆ ಮಾಡುವುದು ಹಾಗೂ ನೀರಾವರಿ ಜಮೀನಿನಲ್ಲಿ ಬಳಸುವ ನೀರು ಸಮರ್ಥವಾಗಿ ಜಮೀನಿಗೆ ಮಾತ್ರ ಬಳೆಕೆಯಾಗುವಂತೆ ನೀರಾವರಿ ಮಾದರಿಯಲ್ಲಿ ದಕ್ಷತೆಯ ಬಗ್ಗೆ ಕಾಳಜಿ ವಹಿಸುವುದು ಎಂದು ಹೇಳಿದ್ದಾರೆ.
ನೀರಾವರಿ ಯೋಜನೆಯಾಗಿ ಮಾರ್ಪಾಡು
ಪ್ರಮುಖವಾಗಿ ಉತ್ತರ ಕರ್ನಾಟಕದ ಬಹುತೇಕ ಪ್ರದೇಶದ ಹಳ್ಳಗಳು ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುತ್ತಿರುವ ಹಿನ್ನಲೆಯಲ್ಲಿ ಅದೇ ಪ್ರವಾಹದ ನೀರನ್ನು ನಿಯಂತ್ರಿಸಿ, ನೀರನ್ನು ಸಂಗ್ರಹಿಸಿ ಕೃಷಿ ಭೂಮಿಗೆ ಬಳಸುವ ನಿಟ್ಟಿನಲ್ಲಿ ಹಾಗೂ ಮುಂಬರುವ ಬೆಳೆಗಳಿಗೆ ರೈತರು ಅದೇ ನೀರಿನ ಸದುಪಯೋಗವನ್ನು ನೀರಾವರಿ ಯೋಜನೆಯಾಗಿ ಪಡೆಯಲು ಈ ಯೋಜನೆ ಅತಿ ಅವಶ್ಯಕವಾಗಿದೆ ಎಂದಿದ್ದಾರೆ.
ರೈತರ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ
ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕದ ರೈತರಿಗೆ ಈ ಯೋಜನೆ ಜಾರಿಗೆ ಬಂದ ನಂತರ ಕೃಷಿಗೆ ವರದಾನ ವಾಗುವದಲ್ಲದೇ ಪ್ರಧಾನಿ ಮೋದಿ ಅವರು ರೈತರ ಪರವಾಗಿ ಕೈಗೊಳ್ಳುತ್ತಿರುವ ಅನೇಕ ಯೋಜನೆಗಳಲ್ಲಿ ಇದೂ ಒಂದಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವಾಗಲು ರೈತರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದಿಂದ ಕೇಂದ್ರ ಸಚಿವನಾಗಿ ರಾಜ್ಯದ ರೈತರ ಸಮಸ್ಯೆಯನ್ನು ಕೇಂದ್ರ ಜಲ ಶಕ್ತಿ ಸಚಿವರಿಗೆ ಮನ ಮುಟ್ಟುವಂತೆ ವಿವರಿಸಿದ್ದೇನೆ. ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಶೀಘ್ರದಲ್ಲಿಯೇ ರಾಜ್ಯದ ಈ 167 ಯೋಜನೆಗಳಗೆ ಅನುಮೋದನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.