ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನೊಳಂಬ ಸಮಾಜದ ಸಿ.ಎಸ್. ಷಡಾಕ್ಷರಿಯವರನ್ನು ಜಿಲ್ಲೆಯಿಂದ ವರ್ಗ ಮಾಡಿರುವುದು ಮಹಾ ಕುತಂತ್ರದಿಂದ ಕೂಡಿದೆ. ಜಿಲ್ಲಾ ನೊಳಂಬ ಸಮಾಜ ಮತ್ತು ನಂದಿ ವಿದ್ಯಾಸಂಸ್ಥೆ ಸಮಾಜ ಪ್ರಬಲವಾಗಿ ಈ ವರ್ಗಾವಣೆಯನ್ನು ಖಂಡಿಸುತ್ತದೆ ಎಂದು ಸಂಸ್ಥೆ ಅಧ್ಯಕ್ಷ ಡಿ.ಬಿ. ಶಂಕರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬ ಪೂರ್ವಗ್ರಹಪೀಡಿತರಾಗಿ ದೂರನ್ನು ನೀಡಿದರೆಂದು ಅದನ್ನೇ ಆಧಾರವಾಗಿಟ್ಟುಕೊಂಡು, ವರ್ಗಾವಣೆ ಮಾಡಲಾಗಿದೆ. ಹಾಗಿದ್ದಲ್ಲಿ ಜಿಲ್ಲೆಯಲ್ಲಿ ಅಂತಹ ದೂರಿರುವ ಎಷ್ಟು ಜನರನ್ನು ವರ್ಗಮಾಡಲಾಗಿದೆ. ಷಡಾಕ್ಷರಿಯವರ ವರ್ಗಾವಣೆಯಿಂದ ರಾಜ್ಯ ಇಡೀ ನೊಳಂಬ ವೀರಶೈವ ಲಿಂಗಾಯತ ಸಮಾಜ ತುಂಬಾ ಆಘಾತಗೊಂಡಿದೆ ಎಂದು ತಿಳಿಸಿದ್ದಾರೆ.
ಈ ಕೂಡಲೇ ಕರ್ನಾಟಕ ಸರ್ಕಾರ ಅವರ ವರ್ಗಾವಣೆ ರದ್ದುಪಡಿಸಬೇಕು. ಒಬ್ಬ ಸಂಘದ ರಾಜ್ಯಧ್ಯಕ್ಷರಾಗಿ ಕಾನೂನು ಬದ್ಧವಾಗಿ ರಾಯಲ್ಟಿ ಕಟ್ಟಿ, ಮಣ್ಣು ಹೇರಲು ಅನುಮತಿ ಪಡೆದಿರುವ ಪ್ರಕ್ರಿಯೆ ನಡೆದಿದೆ. ಅಧ್ಯಕ್ಷರೇ ಹೋಗಿ ಟೇಪು ಹಿಡಿದು ಇಷ್ಟೇ ಮಣ್ಣು ತುಂಬಿ ಎಂದು ಹೇಳಲು ಸಾಧ್ಯವಿಲ್ಲ. ಉಸ್ತುವಾರಿ ಮಂತ್ರಿಗಳು ಹೇಳುವವರ ಮಾತಿಗೆ ಕಿವಿಗೊಡದೆ ಹಿನ್ನಲೆಯನ್ನು ತಿರುಗಿ ನೋಡುವುದು ಉತ್ತಮ. ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ, ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದ ಸಮಾಜದ ನೌಕರರು ಕಿರುಕುಳ ಅನುಭವಿಸುತ್ತಾ ಬಂದಿದ್ದಾರೆ. ಈ ರೀತಿಯ ಕುತಂತ್ರ ವರ್ಗಾವಣೆಯನ್ನು ನಿಲ್ಲಿಸಿ, ಬರದಿಂದ ಕಂಗೆಟ್ಟಿರುವ ರೈತರ ಕಣ್ಣೀರೊರೆಸುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಡಿ.ಬಿ. ಶಂಕರಪ್ಪ ಹೇಳಿದ್ದಾರೆ.