ಬೆಂಗಳೂರು: ಗರಡಿ ಸ್ಯಾಂಡಲ್ವುಡ್ನಲ್ಲಿ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡ್ತಾ ಬಂದ ಸಿನಿಮಾ. ಯೋಗರಾಜ್ ಭಟ್ ನಿರ್ದೇಶನದ ಬಿ.ಸಿ ಪಾಟೀಲ್ ನಿರ್ಮಾಣದ ಕುಸ್ತಿ ಹಿನ್ನೆಲೆ ಕಹಾನಿಯುಳ್ಳ ಗರಡಿ ತನ್ನ ಟ್ರೈಲರ್, ಸಾಂಗ್ನಿಂದ ದೊಡ್ಡ ನಿರೀಕ್ಷೆ ಹುಟ್ಟಿಸಿತ್ತು. ಅದ್ರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಸ್ಟ್ ಅಪಿಯರೆನ್ಸ್ ಕಾರಣಕ್ಕೆ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿತ್ತು. ಹಾಗಾದ್ರೆ ಬಹುನಿರೀಕ್ಷೆಯೊಂದಿಗೆ ತೆರೆಗೆ ಬಂದಿರೋ ಗರಡಿ ಸಿನಿಮಾ ಹೇಗಿದೆ..? ಗರಡಿ ಚಿತ್ರದ ರಿವ್ಯೂ ರಿಪೋರ್ಟ್ ಹೀಗಿದೆ.
ಚಿತ್ರ : ಗರಡಿ
ನಿರ್ದೇಶನ : ಯೋಗರಾಜ್ ಭಟ್
ನಿರ್ಮಾಣ : ವನಜಾ ಪಾಟೀಲ್
ಸಂಗೀತ : ವಿ.ಹರಿಕೃಷ್ಣ
ಸಿನಿಮಾಟೋಗ್ರಫಿ: ನಿರಂಜನ್ ಬಾಬು
ತಾರಾಗಣ: ದರ್ಶನ್, ಯಶಸ್ ಸೂರ್ಯ, ಸೋನಲ್, ಬಿ ಸಿ ಪಾಟೀಲ್, ರವಿಶಂಕರ್, ಸುಜಯ್ ಬೇಲೂರು, ಧರ್ಮಣ್ಣ ಕಡೂರು, ನಯನಾ ಮತ್ತು ಇತರರು.
ಯೋಗರಾಜ್ ಭಟ್ಟರ ಸಿನಿಮಾಗಳಂದ್ರೆ ಮಳೆ, ಕಾಡು, ಹಸಿರು, ಪ್ರೀತಿ, ಪ್ರೇಮ ಅಂತ ಬ್ರ್ಯಾಂಡ್ ಆಗಿಬಿಟ್ಟಿತ್ತು. ಆದ್ರೆ ತಮ್ಮ ಎಂದಿನ ಶೈಲಿಯ ಕಥೆಗಳನ್ನ ಪಕ್ಕಕ್ಕಿಟ್ಟು ಒಂದು ವಿಭಿನ್ನ ಕಥೆಯನ್ನ ಈ ಸಿನಿಮಾದಲ್ಲಿ ಹೇಳಿದ್ದಾರೆ ಯೋಗರಾಜ್ ಭಟ್. ಹೇಸರೇ ಹೇಳುವಂತೆ ಇದು ರಟ್ಟೆಹಳ್ಳಿಯ ಗರಡಿ ಮನೆಯೊಂದರ ಸುತ್ತ ಸುತ್ತುವ ಕಥೆ. ಕಾಲ ಕಾಲದಿಂದಲೂ ಗರಡಿ ಮನೆಯನ್ನ ನಡೆಸಿಕೊಂಡು ಬಂದ ಕುಟುಂಬ ರಾಣೆ ಅವರದ್ದು. ಇಂತಹ ಗರಡಿ ಮನೆಯಲ್ಲಿ ಪೈಲ್ವಾನ್‌ಗಳನ್ನ ಸಜ್ಜುಗೊಳಿಸುವ ಕೆಲಸ ಕೊರಾಪಿಟ್ ರಂಗಪ್ಪಣ್ಣನದ್ದು. ಆದರೆ ಈ ಗರಡಿ ಮನೆಯಲ್ಲಿರುವ ಸೂರಿಗೆ ಅಖಾಡಕ್ಕೆ ಇಳಿಯುವಂತಿಲ್ಲ ಅನ್ನೋ ನಿರ್ಬಂಧ ಇದೆ. ಆ ನಿರ್ಬಂಧ ಮೀರಿಯೂ ಅವನು ಕುಸ್ತಿ ಕಲಿತಿರ್ತಾನೆ. ರಾಣೆ ಫ್ಯಾಮಿಲಿ ಮನೆಮಗ ಮತ್ತು ಸೂರಿ ನಡುವೆ ಶೀಲ್ಡ್ ಗೆಲ್ಲೋದಕ್ಕೆ ಪೈಪೋಟಿ ನಡೆಯುತ್ತೆ. ಅದು ಶೀಲ್ಡ್ ಗೆಲ್ಲೋ ಪೈಪೋಟಿನೂ ಹೌದು ನಾಯಕಿಯನ್ನ ಗೆಲ್ಲೋ ಪೈಪೋಟಿಯೂ ಹೌದು. ಈ ಪೈಪೋಟಿಯಲ್ಲಿ ಜಂಗಿಕುಸ್ತಿ ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದೇ ಈ ಸಿನಿಮಾ ಕಥೆ.
ಗರಡಿ ಕಲಾವಿದರ ಪರ್ಫಾರ್ಮೆನ್ಸ್
ನಾಯಕ ಯಶಸ್ ಸೂರ್ಯಗೆ ಮೊದಲ ಬಾರಿ ಒಂದು ದೊಡ್ಡ ಸಿನಿಮಾದ ಅವಕಾಶ ಸಿಕ್ಕಿದೆ. ಅದನ್ನವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ನಾಯಕಿ ಸೊನಲ್ ಸೋಷಿಯಲ್ ಮಿಡಿಯಾ ಕ್ವೀನ್ ಪಪ್ಪಿಯಾಗಿ ಮೋಡಿ ಮಾಡಿದ್ದಾರೆ. ಕೋರಾಪೀಟ್ ರಂಗಪ್ಪಣ್ಣನ ಪಾತ್ರದಲ್ಲಿ ಬಿ.ಸಿ ಪಾಟೀಲರು ಸಹಜಾಭಿನಯದಿಂದ ಗಮನ ಸೆಳೀತಾರೆ. ಧರ್ಮಣ್ಣ ಉಬ್ಬು ಹಲ್ಲಿನ ಗೆಳೆಯನ ಪಾತ್ರದಲ್ಲಿ ನಗಿಸ್ತಾರೆ. ರವಿಶಂಕರ್ ಡಿಫ್ರೆಂಟ್ ಮ್ಯಾನರಿಸಂ ಟ್ರೈ ಮಾಡಿದ್ದು, ಖಡಕ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಮೊದಲ ಬಾರಿ ಬಣ್ಣ ಹಚ್ಚಿರೋ ಬಿ.ಸಿ ಪಾಟೀಲರ ಅಳಿಯ ಸುಜಯ್ ಬೇಲೂರು ನೆಗೆಟಿವ್ ರೋಲ್ನಲ್ಲಿ ಸಖತ್ ಸ್ಕೋರ್ ಮಾಡಿದ್ದಾರೆ. ಪಟ್ಟುಗಳನ್ನ ಹಾಕ್ತಾ ಅಖಾಡಕ್ಕೆ ಇಳಿದು ಮಸ್ತ್ ಆಗಿ ಕುಸ್ತಿಯಾಡಿದ್ದಾರೆ.
ಇನ್ನೂ ಇವರೆಲ್ಲರ ಜೊತೆಗೆ ಚಾಲೆಂಜಿಂಗ್ ಸ್ಟಾರ್ ಕೆಮಿಯೋ ಬಗ್ಗೆ ಹೇಳದೇ ಇದ್ರೆ ಹೇಗೆ.,. ಸಿನಿಮಾದ ಕೊನೆಗೆ ಎಂಟ್ರಿ ಕೊಡೋ ದರ್ಶನ್, ಕೊನೆಯ 20 ನಿಮಿಷ ಅವಧಿಯನ್ನ ತಮ್ಮ ವಶಕ್ಕೆ ತೆಗೆದುಕೊಂಡುಬಿಡ್ತಾರೆ. ಮಸ್ತ್ ಡೈಲಾಗ್ ಹೊಡೆಯುತ್ತ, ವಿಲನ್‌ಗಳು ಸುಸ್ತು ಆಗುವವರೆಗೂ ಚಚ್ಚಿ ಹಾಕ್ತಾರೆ. ಡಿ ಬಾಸ್ ಫ್ಯಾನ್ಸ್ಗೆ ಸಿನಿಮಾದ ಕೊನೆಯಲ್ಲಿ ಸ್ಪೆಷಲ್ ಟ್ರೀಟ್ ಇದೆ.
ಗರಡಿ ಪ್ಲಸ್ ಪಾಯಿಂಟ್ಸ್
- ಬಾದಾಮಿ ಸುತ್ತಣ ಸುಂದರ ಲೊಕೇಶನ್ಸ್
- ಮೈ ನವಿರೇಳಿಸುವ ಕುಸ್ತಿ ಫೈಟ್ ದೃಶ್ಯಗಳು
- ವಿ.ಹರಿಕೃಷ್ಣ ಸಂಗೀತ- ಭಟ್ಟರ ಸಾಹಿತ್ಯದ ಹಾಡುಗಳು
- ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ
- ಪಂಚಿಗ್ ಡೈಲಾಗ್ಸ್
ಗರಡಿ ಮೈನಸ್ ಪಾಯಿಂಟ್ಸ್
ಯೋಗರಾಜ್ ಭಟ್ ಹಿಂದಿನ ಯಾವ ಸಿನಿಮಾಗಳ ಕುರುಹು ಇಲ್ಲಿ ಸಿಗೋದಿಲ್ಲ. ಸಂಪೂರ್ಣ ಹೊಸ ರೀತಿಯ ಕಥೆ, ಮೇಕಿಂಗ್ ಎಲ್ಲವೂ ಇದೆ. ಗರಡಿ ಸಿನಿಮಾದ ಕಥೆ ಯಾವುದೇ ಫ್ಲಾಶ್‌ಬ್ಯಾಕ್ ತಂತ್ರಗಳಿಲ್ಲದೇ, ಸರಳವಾಗಿ, ಸರಾಗವಾಗಿ ಸಾಗುತ್ತೆ. ಹಾಗೆಯೇ, ಬಹುಪಾಲು ಕಥೆ ಮುಂದೇನಾಗಬಹುದು ಅನ್ನೋದನ್ನ ಊಹಿಸಬಹುದಾಗಿದೆ. ಜೊತೆಗೆ ಯೋಗರಾಜ್ ಭಟ್ ಸಿನಿಮಾಗಳಲ್ಲಿ ಪ್ರೇಮಕಥೆಗೆ ಇರುತ್ತಿದ್ದ ತೀವ್ರತೆ ಇಲ್ಲಿ ಒಂಚೂರು ಕಮ್ಮಿ ಆಗಿದೆ ಎನ್ನಬಹುದು.
ಗರಡಿ ಚಿತ್ರಕ್ಕೆ ಪವರ್ ರೇಟಿಂಗ್
3 ½ ಸ್ಟಾರ್ಸ್
ಗರಡಿ ಫೈನಲ್ ಸ್ಟೇಟ್ಮೆಂಟ್
ಗರಡಿ ಸಿನಿಮಾ ನಮ್ಮ ಮಣ್ಣಿನ ಸೊಗಡಿನ ಕುಸ್ತಿ ಕಲೆಯ ಕುರಿತು ಮಾಡಿರೋ ಅಪ್ಪಟ ಕನ್ನಡದ ದೇಸಿ ಸಿನಿಮಾ. ಯೋಗರಾಜ್ ಭಟ್ರು ತಮ್ಮ ಎಂದಿನ ಶೈಲಿಯನ್ನ ಬದಿಗಿಟ್ಟು ಮಾಸ್ ಸಿನಿಮಾ ಮಾಡೋ ಪ್ರಯತ್ನ ಮಾಡಿದ್ದಾರೆ. ಹಾಗಂತ ಇದು ಜಸ್ಟ್ ಮಾಸ್ ಆಡಿಯನ್ಸ್ಗಷ್ಟೇ ಇಷ್ಟವಾಗೋ ಸಿನಿಮಾ ಅಲ್ಲ. ಇಲ್ಲೊಂದು ಗಟ್ಟಿ ಕಥೆಯೂ ಇದೆ. ಪಟ್ಟು ಹಾಕಿ ಕುರಿಸುವ ಕುಸ್ತಿ ಮಸ್ತಿಯೂ ಇದೆ. ಖಂಡಿತ ಕುಟುಂಬ ಸಮೇತರಾಗಿ ಎಲ್ಲರೂ ನೋಡಬಹುದಾದ ಅಪ್ಪಟ ಮನರಂಜನೆಯ ಸಿನಿಮಾ ಗರಡಿ.