ಬೆಂಗಳೂರು : ಧಾರವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಗ ರಕ್ಷಕರು ಶೂ ಹಾಕಿದ್ದಾರೆಂಬ ಸಂಗತಿಯು ವಿವಾದದ ಸ್ವರೂಪ ಪಡೆದಿರುವುದು ದುರದೃಷ್ಟಕರ ಬೆಳವಣಿಗೆ ಎಂದು ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಶಾಸಕ ಯತ್ನಾಳ್ ಅವರೇ, ಮಾನವೀಯ ಸಹಾಯದ ವಿಷಯದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ನಿಮ್ಮ ಈ ರೋಷಾವೇಷವನ್ನು, ನಿಮ್ಮ ಹೈಕಮಾಂಡ್ ಮುಂದೆ ರಾಜ್ಯಕ್ಕೊಬ್ಬ ವಿಪಕ್ಷೀಯ ನಾಯಕನ ಸ್ಥಾನವನ್ನು ಆರಿಸುವುದಕ್ಕಾಗಿ ಬಳಸಿಕೊಳ್ಳಿ. ಇಲ್ಲವೇ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ಕೇಳುವುದಕ್ಕಾದರೂ ಬಳಸಿ. ಸುಮ್ಮನೇ ಕಾಲಹರಣ ಮಾಡಬೇಡಿ ಎಂದು ಕುಟುಕಿದ್ದಾರೆ.
ವೈಯಕ್ತಿಕವಾಗಿ ವ್ಯಕ್ತಿ ಗೌರವ ಮತ್ತು ಘನತೆಯಲ್ಲಿ ನಂಬಿಕೆ ಇಟ್ಟಿರುವ ನನಗೆ ಒಬ್ಬರಿಂದ ಶೂ ಹಾಕಿಸಿಕೊಳ್ಳಬೇಕೆಂಬ ದರ್ಪದ ಇರಾದೆ ಇಲ್ಲ. ಆದರೆ, ಹಿಂದೆ Hip joint knee ತೊಂದರೆ ಸಿಲುಕಿ ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಿಂದ ಬಾಗುವುದು ಕಷ್ಟವಾಗಿದ್ದ ಕಾರಣ ನಮ್ಮ ಆತ್ಮೀಯ ವಲಯದಿಂದ ಸಹಾಯ ಪಡೆದಿದ್ದೇನೆ ಎಂದು ಹೇಳಿದ್ದಾರೆ.
ವಿವಾದಗಳಿಗೆ ತಲೆ ಕೆಡಿಸಿಕೊಳ್ಳಲ್ಲ
ಬಹು ವರ್ಷಗಳ ಕಾಲ ನನ್ನೊಡನೆಯೇ ಒಂದು ಕುಟುಂಬದಂತೆ ಇರುವ ನಮ್ಮ ಕೆಲ ಸಿಬ್ಬಂದಿಗಳ ಬಳಿ ಕಾಲಿನ ಸಮಸ್ಯೆಯ ಹಿನ್ನಲೆಯಲ್ಲಿ ಪಡೆದುಕೊಂಡಿರುವ ಈ ಸಹಾಯಕ್ಕೆ ಮಾನವೀಯ ನೆಲೆ ಇದೆ. ಸಹಾಯಕ್ಕೆ ಅಂಹಕಾರ, ಅಧಿಕಾರದ ಅಮಲು ಎಂಬ ಶಬ್ದಗಳನ್ನು ಬಳಸುವುದು ಸರಿಯಾದ ಕ್ರಮವಲ್ಲ. ಇನ್ನು ನನ್ನನ್ನು ಬಲ್ಲ ಎಲ್ಲರಿಗೂ ವ್ಯಕ್ತಿ ಗೌರವಕ್ಕೆ ಸಂಬಂಧಿಸಿದ ನನ್ನ ನಿಲುವುಗಳ ಬಗ್ಗೆ ಚೆನ್ನಾಗಿಯೇ ತಿಳಿದಿರುವ ಕಾರಣ ಇಂತಹ ಸಣ್ಣಪುಟ್ಟ ವಿವಾದಗಳಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.