Tuesday, December 24, 2024

ಬಿಎಸ್​ವೈ ಮೂಲಕವಾದರೂ ಮೋದಿಗೆ ರಾಜ್ಯದ ಜನರ ಸಂಕಷ್ಟ ಅರಿವಾಗಲಿ : ದಿನೇಶ್ ಗುಂಡೂರಾವ್

ಬೆಂಗಳೂರು : ಯಡಿಯೂರಪ್ಪನವರೇ, ನಿಮ್ಮ ನೇತೃತ್ವದಲ್ಲಿ ಬರ ಅಧ್ಯಯನ ಮಾಡುತ್ತಿರುವುದನ್ನು ನಾನು ಶ್ಲಾಘಿಸುತ್ತೇನೆ. ನಿಮ್ಮ ಮೂಲಕವಾದರೂ ರಾಜ್ಯದ ಜನರ ಸಂಕಷ್ಟ ಪ್ರಧಾನಿ ನರೇಂದ್ರ ಮೋದಿಯವರಿಗೆ ಅರಿವಾಗಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಈಗಾಗಲೇ ಬರದಿಂದ 31 ಸಾವಿರ ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ‌. SDRF & NDRF ನಿಯಮದ ಅನುಸಾರ 17,900 ಕೋಟಿ ಪರಿಹಾರ ರಾಜ್ಯಕ್ಕೆ ಬರಬೇಕು‌. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೇಂದ್ರಕ್ಕೆ ಮನವಿ ಕೂಡ ಸಲ್ಲಿಸಿದೆ‌. ಈ ಪರಿಹಾರದ ಹಣ ನಿಮಗೆ ಕೊಡಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪನವರೇ, ಪುಕ್ಕಟೆ ಭಾಗ್ಯಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಹೇಳಿದ್ದೀರಿ‌. ಜನರಿಗೆ ಆರ್ಥಿಕ ಸ್ವಾತಂತ್ರ್ಯ ಕಲ್ಪಿಸುವುದನ್ನು ನೀವು ಪುಕ್ಕಟೆ ಭಾಗ್ಯ ಎಂದು ಹೇಳಿರುವುದು ಖೇದಕರ‌. ಹೋಗಲಿ, ನಿಮ್ಮ ಪ್ರಕಾರ ಪುಕ್ಕಟೆ ಭಾಗ್ಯಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದಿಟ್ಟುಕೊಳ್ಳೋಣ. ಆದರೆ, ನಮ್ಮ ರಾಜ್ಯದಿಂದ ಅತಿ ಹೆಚ್ಚು ತೆರಿಗೆ ಪಡೆದು, ನಮ್ಮ ರಾಜ್ಯಕ್ಕೆ ನಿಮ್ಮ ಮೋದಿಯವರು ಒಂದು ನಯಾಪೈಸೆ ಪರಿಹಾರ ಕೊಡದಷ್ಟು ಅಶಕ್ತರಾಗಿದ್ದಾರೆ. ಹಾಗಾದರೆ ಮೋದಿ ಸರ್ಕಾರ ದಿವಾಳಿಯಾಗಿದೆ ಎಂದರ್ಥವಲ್ಲವೇ? ಎಂದು ಚಾಟಿ ಬೀಸಿದ್ದಾರೆ.

ನಾವು ಕೇಳಿತ್ತಿರುವ ಭಿಕ್ಷೆಯಲ್ಲ

ಯಡಿಯೂರಪ್ಪನವರೆ, ಮಹಾರಾಷ್ಟ್ರ,ತಮಿಳುನಾಡು ಬಿಟ್ಟರೆ ಅತಿ‌ ಹೆಚ್ಚು GST ಕೊಡುಗೆಯಲ್ಲಿ ಕರ್ನಾಟಕವೇ ಮೂರನೆಯದು‌. ನಮ್ಮಿಂದ ಹೆಚ್ಚಿನ ತೆರಿಗೆ ಪಾಲು ಪಡೆದಿರುವ ಮೋದಿ ಸರ್ಕಾರ ನಮ್ಮ ರಾಜ್ಯಕ್ಕೆ ಏನು ಕೊಡುಗೆ ನೀಡಿದೆ? ಹೇಳಿ ನೋಡೋಣ. ಬರ ಪರಿಹಾರಕ್ಕೆ ಹಣ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯವೇ ಹೊರತು, ಅದು ನಾವು ಕೇಳಿತ್ತಿರುವ ಭಿಕ್ಷೆಯಲ್ಲ ಎಂದು ದಿನೇಶ್ ಗುಂಡೂರಾವ್ ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES