ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಭೀಕರ ಬರ, ಅಭಿವೃದ್ಧಿಗೆ ಅನುದಾನ ಸೇರಿದಂತೆ ವಿವಿಧ ವಿಚಾರಗಳಲ್ಲಿ ಉದಾಸೀನ ಮನೋಭಾವವನ್ನು ತೋರುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಅವರು ಉಪವಾಸ ಸತ್ಯಾಗ್ರಹ ಮಾಡುವ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ವಿಚಾರದಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯ ವಿರುದ್ಧ ಕಿಡಿಕಾರಿದ್ದಾರೆ.
ಅಧಿವೇಶನಕ್ಕೂ ಮುಂಚೆ ಮೂರು ದಿನ ಹೋರಾಟ ಮಾಡಲಾಗುತ್ತದೆ. ಅನುದಾನ ಸ್ಥಗಿತ, ಆರ್. ಆರ್. ನಗರ ಸಮಸ್ಯೆ ಸೇರಿ ಎಲ್ಲ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲಾಗುತ್ತದೆ. ಈ ತಿಂಗಳ ಅಂತ್ಯದೊಳಗೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಹೇಳಿದ್ದಾರೆ. ವಿಧಾನಸೌಧ ಅಥವಾ ಪ್ರೀಢಂ ಪಾರ್ಕ್ನಲ್ಲಿ ಈ ಸತ್ಯಾಗ್ರಹ ನಡೆಯಲಿದ್ದು, ನಾಳೆ ದಿನಾಂಕ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸರ್ಕಾರ ಕಮಿಷನ್ ಕೇಳ್ತಿದೆ
ಎಲ್ಲ ಕಡೆ ಗುತ್ತಿಗೆದಾರರು ಕೆಲಸ ಮಾಡಲು ಸಿದ್ಧ ಇಲ್ಲ. ಕಾಮಗಾರಿಗಳಿಗೆ ಹಣ ಕೊಡ್ತಿಲ್ಲ. ಹಳೆಯ ಕಾಮಗಾರಿಗಳನ್ನು ಮುಂದುವರಿಸಲು 7.5% ರಿಂದ 8% ಕಮೀಷನ್ ಕೇಳ್ತಿದ್ದಾರೆ. ಗುತ್ತಿಗೆದಾರರಿಂದ ಸರ್ಕಾರ ಕಮಿಷನ್ ಕೇಳ್ತಿದೆ. ಹಾಗಾಗಿ, ಗುತ್ತಿಗೆದಾರರು ಕೆಲಸ ಮಾಡಲು ಮುಂದೆ ಬರ್ತಿಲ್ಲ. ಈ ರೀತಿಯ ವಾತಾವರಣ ಇಡೀ ರಾಜ್ಯದಲ್ಲಿ ಇದೆ. ಸರ್ಕಾರದ ಆಡಳಿತ ವೈಖರಿ ಖಂಡಿಸುತ್ತೇನೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.