ಬೆಂಗಳೂರು : ಕಳ್ಳನನ್ನು ಹಿಡಿಯುವುದು ಪೊಲೀಸ್ ಅಧಿಕಾರಿ ಕೆಲಸ. ಆದರೆ, ಪೊಲೀಸ್ ಅಧಿಕಾರಿಯೇ ಕಳ್ಳತನ ಮಾಡಿ ಖಾಕಿ ಬಲೆಗೆ ಬಿದ್ದಿದ್ದಾನೆ.
ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಹೆಡ್ ಕಾನ್ಸ್‌ಟೇಬಲ್ ಓರ್ವರನ್ನು ಬೈಯ್ಯಪ್ಪನಹಳ್ಳಿ ಠಾಣೆ ಪೋಲಿಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿದ್ದರಾಮರೆಡ್ಡಿ (37)ಬಂಧಿತ ಆರೋಪಿಯಾಗಿದ್ದು, ಈತ ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಆಗಿದ್ದ. ಕಳ್ಳತನದಲ್ಲಿ ಈತನಿಗೆ ಸಾಬಣ್ಣ (38) ಸಾಥ್ ನೀಡುತ್ತಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ಬೆಳಗ್ಗೆ ಪೋಲಿಸ್ ಡ್ಯೂಟಿ, ರಾತ್ರಿ ವೇಳೆ ಕಳ್ಳತನವೇ ಕಾಯಕವನ್ನಾಗಿ ಮಾಡಿಕೊಂಡಿದ್ದ ಈತ ಕೇರಳ, ತಮಿಳುನಾಡು ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಇನ್ನು, ಆಗಸ್ಟ್‌ನಲ್ಲಿ ಬೈಯ್ಯಪ್ಪನಹಳ್ಳಿ ಸ್ಟೇಷನ್ ಬಳಿ ರೈಲಿನಿಂದ ಪ್ರಯಾಣಿಕರ ಬ್ಯಾಗ್ ಕಳುವು ಮಾಡಿ, ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ದೋಚಿಕೊಂಡಿದ್ದ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಮಹಿಳಾ ರೈಲ್ವೆ ಪ್ರಯಾಣಿಕರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ತಾನು ತ್ರಿಶೂರ್‌ನಿಂದ ಬೆಂಗಳೂರಿಗೆ ಬಂದ ರೈಲಿನಲ್ಲಿ ಹಿಂತಿರುಗುತ್ತಿದ್ದಾಗ 10 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದೇನೆ ಎಂದು ಮಹಿಳೆ ದೂರು ಸಲ್ಲಿಸಿದ್ದರು. ಸದ್ಯ ಆರೋಪಿ ಸಿದ್ದರಾಮರೆಡ್ಡಿನ ಬಂಧಿಸಲಾಗಿದ್ದು, ಘಟನೆ ಬೆನ್ನಲ್ಲೇ ಆರೋಪಿಯನ್ನು ಅಮಾನತುಗೊಳಿಸಲಾಗಿದೆ.