ಮೈಸೂರು : ಬಿಜೆಪಿ ಲೀಡರ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ಕೊಟ್ಟಿದ್ದಾರೆ.
ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಯಾವುದೇ ವ್ಯಕ್ತಿ ಕೇಳಿದ್ರು ನರೇಂದ್ರ ಮೋದಿ ಗೊತ್ತು. ವಿಶ್ವದಲ್ಲಿ ಯಾರನ್ನೇ ಕೇಳಿದ್ರೂ ಈ ದೇಶದ ಪ್ರಧಾನಿ ಯಾರು ಅಂತ ಹೇಳ್ತಾರೆ. ಆದರೆ, ನಿಮ್ಮ ನಾಯಕ ಯಾರು? ರಾಹುಲ್ ಗಾಂಧಿನಾ? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ಲೀಡರ್ ಲೆಸ್ ಅಂತ ಹೇಳುವುದು ಬಹಳ ಸುಲಭ. ರಾಜ್ಯದಲ್ಲಿ ನಿಮ್ಮ ಇಬ್ಬರು ಲೀಡರ್‌ಗಳು ಕುಸ್ತಿ ಆಡ್ತಿದ್ದಾರೆ. ಇವರನ್ನ ಲೀಡರ್ ಎಂದು ಹೇಳ್ತೀರಾ? ಆದರೆ, ನಾವು ನಮ್ಮ ನಾಯಕ ಪ್ರಧಾನಿ ಮೋದಿ ಎಂದು ಹೆಮ್ಮೆಯಿಂದ ಹೇಳಿಕೊಳ್ತೀವಿ. ಸಚಿವ ಪ್ರಿಯಾಂಕ್ ಖರ್ಗೆ ಮೊದಲು ಸಿದ್ದರಾಮಯ್ಯ ಸಿಎಂ ಆಗಿರಲಿ ಅಂದವರು, ಈಗ ನಾನೇ ಸಿಎಂ ಸಿಎಂ ಎನ್ನುವ ಮಟ್ಟಕ್ಕೆ ಬೆಳೆದಿದ್ದಾರೆ. ಈಗ ಕಾಂಗ್ರೆಸ್‌ಗೆ ಬಂದಿರುವ ದುಸ್ಥಿತಿ ಹಿಂದೆ ಯಾವ ಸರ್ಕಾರಕ್ಕೂ ಬಂದಿಲ್ಲ. ರಾಜೀನಾಮೆ ಕೊಟ್ಟು ಹೋಗಿ ಎಂದು ಚಾಟಿ ಬೀಸಿದ್ದಾರೆ.
ಜಾತಿಗೆ ಒಬ್ಬೊಬ್ಬರನ್ನು ಸಿಎಂ ಮಾಡಿ
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನದ ಜಟಾಪಟಿ ವಿಚಾರ ಕುರಿತು ಮಾತನಾಡಿ, ಈ ಪ್ರಶ್ನೆಯನ್ನ ಸಿಎಂ ಸಿದ್ದರಾಮಯ್ಯನವರನ್ನೇ ಕೇಳಿ. ಯಾವುದೇ ಮುಖ್ಯಮಂತ್ರಿ 5 ವರ್ಷ ನಾನೇ ಮುಖ್ಯಮಂತ್ರಿ ಹೇಳುವ ದುಸ್ಥಿತಿ ಬಂದಿರಲಿಲ್ಲ. 135 ಸೀಟು ಇಟ್ಕೊಂಡು ಕಾಂಗ್ರೆಸ್‌ಗೆ ಈ ರೀತಿ ಹೇಳುವ ದುಸ್ಥಿತಿ ಬರಬಾರದಿತ್ತು ಎಂದು ಲೇವಡಿ ಮಾಡಿದ್ದಾರೆ.
ಕುರುಬರಿಗೆ ಸಿದ್ದರಾಮಯ್ಯ, ಒಕ್ಕಲಿಗರಿಗೆ ಡಿಕೆಶಿ
ಮೂರು ದಿನದ ಕೆಳಗೆ ಕಾಂಗ್ರೆಸ್ ನಾಯಕರಾದ ಸುರ್ಜೇವಾಲ, ವೇಣುಗೋಪಾಲ್ ಬೆಂಗಳೂರಿಗೆ ಬಂದಿದ್ರು. ಎಲ್ಲಾ ಶಾಸಕರಿಗೂ ಯಾವುದೇ ರೀತಿಯ ಬಹಿರಂಗ ಹೇಳಿಕೆ ಕೊಡಬಾರದು ಅಂತ ಹೇಳಿದ್ರು. ಆದ್ರೆ ಸ್ವತಃ ಮುಖ್ಯಮಂತ್ರಿಗಳೇ ಬಹಿರಂಗವಾಗಿ ಹೇಳಿಕೆ ಕೊಟ್ರು. ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅನ್ನೋದು ಕೆಲ ಶಾಸಕರ ಆಸೆ. ಇನ್ನು ಕೆಲವರು ಸಚಿವ ಪ್ರಿಯಾಂಕ್ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ದಲಿತರು ಮುಖ್ಯಮಂತ್ರಿ ಆಗಬೇಕು ಅಂತ ಹೇಳ್ತಿದ್ದಾರೆ. ನಾನು ಪ್ರಧಾನ ಮಂತ್ರಿಗೆ ಪತ್ರ ಬರೆಯಬೇಕೋ ಗೊತ್ತಿಲ್ಲ. ಒಂದೊಂದು ಜಾತಿಗೆ ಒಂದೊ ಎರಡೋ ಮುಖ್ಯಮಂತ್ರಿ ಕೊಟ್ಟುಬಿಡಿ ಅನ್ನಬೇಕು. ಸಿದ್ದರಾಮಯ್ಯ ಕುರುಬರಿಗೆ, ಒಕ್ಕಲಿಗರಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಟಾಂಗ್ ಕೊಟ್ಟಿದ್ದಾರೆ.