ಹಾಸನ : ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಎಲ್ಲೂ ರಾಜಕೀಯ ಮಾತನಾಡಬೇಡಿ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ. ನಾನೂ ರಾಜಕೀಯ ಮಾತನಾಡೋದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಾನೇ ಐದು ವರ್ಷ ಮುಂದುವರೆಯುತ್ತೇನೆ ಎಂಬ ಸಿಎಂ ಹೇಳಿಕೆ ವಿಚಾರ ಕುರಿತು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, AICC ಪ್ರಧಾನ ಕಾರ್ಯದರ್ಶಿ ಅವರ ನಿರ್ದೇಶನದಂತೆ ಮಾಧ್ಯಮದ ಮುಂದೆ ರಾಜಕೀಯ ಮಾತನಾಡೋದಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಿಎಂ ಅಂತಾ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದರ ಕುರಿತು ಮಾತನಾಡಿ, ಹೈಕಮಾಂಡ್ ಏನ್ ಹೇಳಿದ್ದಾರೆ. ಅದೆಲ್ಲಾ ನನಗೆ ಗೊತ್ತಿಲ್ಲ ಎಂದು ಹೇಳಿದರು. ನಮ್ಮ ಮುಂದೆ ಇರೋದು ಅಭಿವೃದ್ಧಿ. ಜನ ಐದು ವರ್ಷ ಆಡಳಿತ ನಡೆಸಿ ಅಂತ ಆಶೀರ್ವಾದ ಮಾಡಿದ್ದಾರೆ. ಆಗಲೇ ಆರು ತಿಂಗಳು ಆಗ್ತಾ ಇದೆ. ಈಗ ಬರಗಾಲ ಇದೆ, ಬರಗಾಲ ಎದುರಿಸೋದು ಹೇಗೆ ಎಂದು ಚಿಂತಿಸುತ್ತಿದ್ದೇವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ನಾವು 20 ಸೀಟ್ ಗೆಲ್ಲುತ್ತೇವೆ
ಗ್ಯಾರಂಟಿ ಯೋಜನೆಗಳನ್ನು ಕೊಡೋದಕ್ಕೆ ಸರ್ಕಾರ ತಿಣುಕಾಡುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪ ವಿಚಾರವಾಗಿ ಮಾತನಾಡಿ, ನಾವು ಗ್ಯಾರಂಟಿ ಯೋಜನೆಗಳನ್ನ ಇಡೀ ಸಮುದಾಯಕ್ಕೆ ತಲುಪಿಸಿದ್ದೇವೆ. ಆರೂವರೆ ಕೋಟಿ ಜನಕ್ಕೂ ಕೂಡು ತಲುಪುತ್ತದೆ. ಅದು 50 ಲಕ್ಷ ಜನಕ್ಕೆ ತಲುಪದೇ ಇರಬಹುದು, ಆರು ಕೋಟಿ ಜನಕ್ಕಂತೂ ತಲುಪಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ 20 ಸೀಟ್ ಗೆಲ್ಲುತ್ತೇವೆ ಎಂದು ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.