ಬೆಂಗಳೂರು : ಸದಸ್ಯ ಕಾರ್ಯದರ್ಶಿ ಸಹಿಯೇ ಇಲ್ಲದ ಕಾಂತರಾಜ್ ವರದಿಯನ್ನು (ರಿಪೋರ್ಟ್) ತೆಗೆದುಕೊಂಡು ಹೋಗಿ ಬೆಂಕಿಗೆ ಹಾಕಿ ಸುಡಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂತರಾಜ್ ವರದಿ ವೈಜ್ಞಾನಿಕವೇ ಅಲ್ಲ. ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ನಾಮಕಾವಸ್ಥೆ ಸಿದ್ಧತೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂತರಾಜ್ ರಿಪೋರ್ಟ್ ಬಗ್ಗೆ ಇಬ್ಬರು ಈಗ ಬಡಿದಾಡುತ್ತಿದ್ದಾರೆ. ನಾನೇ ಹಿಂದುಳಿದ ವರ್ಗಗಳ ಚಾಂಪಿಯನ್ ಅಂತ ಪ್ರೊಜೆಕ್ಟ್ ಮಾಡಿಕೊಳ್ಳಲು ಸಿದ್ದರಾಮಯ್ಯ ಕಾಂತರಾಜ್ ರಿಪೋರ್ಟ್ ಬಗ್ಗೆ ಎಂಟು ವರ್ಷಗಳಿಂದ ಮತ್ತೆ ಮತ್ತೆ ಹೇಳಿದರು. ನಾಳೆ ಬಾ ಅನ್ನೋದು ಸಿದ್ದರಾಮಯ್ಯನವರ ಘೋಷಣೆಯಾಗಿದೆ. ವರದಿ ಬಿಡುಗಡೆ ಮಾಡಿದರೆ ಕೋರ್ಟ್ನಲ್ಲಿ ಒಂದೇ ದಿನದಲ್ಲಿ ಬಿದ್ದು ಹೋಗುತ್ತದೆ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಕರ್ನಾಟಕದ ಇತಿಹಾಸದಲ್ಲೇ ಇಂಥ ನಾಡ ದ್ರೋಹಿ ಸಿಎಂರನ್ನ ಕಂಡಿರಲಿಲ್ಲ : ಬಿಜೆಪಿ ಆಕ್ರೋಶ
ಅಭಿಪ್ರಾಯ ಕೇಳಲು ಸರ್ಕಾರವೇ ಇರಲ್ಲ
ಒಂದೇ ಸರ್ಕಾರದಲ್ಲಿ ಎರಡು ಅಭಿಪ್ರಾಯ ಇರುವುದರಿಂದ ಅವರಿಗೆ ಮುಂದುವರಿಯಲು ಅಧಿಕಾರವಿಲ್ಲ. ಕಾಂತರಾಜ್ ರಿಪೋರ್ಟ್ ಬಗ್ಗೆ ಮೊದಲು ಸರ್ಕಾರ ತೀರ್ಮಾನ ಮಾಡಲಿ. ನಂತರ ವಿಪಕ್ಷವಾಗಿ ಬಿಜೆಪಿ ತನ್ನ ಅಭಿಪ್ರಾಯ ಹೇಳುತ್ತದೆ. ಜಾತಿ ಗಣತಿ ವರದಿ ಬಗ್ಗೆ ಬಿಜೆಪಿ ಅಭಿಪ್ರಾಯ ಕೇಳಲು ಅಲ್ಲಿಯ ತನಕ ಸರ್ಕಾರವೇ ಇರಲ್ಲ. ವ್ಯವಸ್ಥಿತವಾಗಿ ಇಡೀ ದೇಶಕ್ಕೆ ಅನ್ವಯವಾಗುವಂತೆ ರಿಸರ್ವೇಷನ್ ಬಗ್ಗೆ ಬಿಜೆಪಿ ಒಂದು ಸ್ಪಷ್ಟ ನಿಲುವು ತಳೆಯಲಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.