ಮಂಡ್ಯ : ಅಧಿಕಾರಕ್ಕಾಗಿ ರೈತರನ್ನ ಬಲಿ ಕೊಡಲ್ಲ. ನಿಮ್ಮ ಹಿತ ಕಾಯುವ ಕೆಲಸ ನಾವು ಮಾಡೇ ಮಾಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ನಾವು ನಿಮ್ಮ ಹಿತ ಕಾಯುವುದರಲ್ಲಿ ಹಿಂದೆ ಬೀಳಲ್ಲ. ಆದರೆ, ಈಗ ಇರೋ ಬೆಳೆ ಉಳಿಸಿಕೊಳ್ಳಲು ಪ್ರಯತ್ನ ಮಾಡಲಾಗುವುದು. ಬೆಳಗಾವಿಯಲ್ಲಿ ಅಧಿವೇಶನ ಕರೆದು ಚರ್ಚೆ ಮಾಡ್ತೀವಿ. ಸದ್ಯದಲ್ಲೇ ಬೆಳಗಾವಿಯಲ್ಲಿ ಅಧಿವೇಶನ ಕರೆಯಲಾಗುವುದು ಎಂದು ತಿಳಿಸಿದ್ದಾರೆ.
ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಪ್ರತಿಭಟನೆಯಲ್ಲಿ ಸಿಎಂ ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಂದೆ ರೈತ ನಾಯಕಿ ಸುನಂದಾ ಜಯರಾಂ ಮನವಿ ಸಲ್ಲಿಸಿದ್ದಾರೆ. ಕಾವೇರಿ ನೀರಿನ ಸಮಸ್ಯೆ ಇಂದಿನದ್ದಲ್ಲ. ಕಾವೇರಿಗಾಗಿ ನಾವೂ ಹಿಂದಿನಿಂದಲೂ ಹೋರಾಟ ಮಾಡ್ತಿದ್ದೇವೆ. ಸರ್ಕಾರವು ಕಾನೂನು ಅಥವಾ ಮಾತುಕತೆ ಮೂಲಕ ಬಗೆಹರಿಸಿಕೊಂಡಿದೆ. ಆದ್ರೆ, ಈ ಬಾರಿ ಕಾವೇರಿ ಸಮಸ್ಯೆ ಗಂಭೀರವಾಗಿದೆ. ನಮ್ಮ ಹಕ್ಕನ್ನ ಕಸಿದುಕೊಳ್ಳುವ ಕೆಲಸವನ್ನ ತಮಿಳುನಾಡು ಸರ್ಕಾರ ಮಾಡ್ತಿದೆ. ಈ ಸಂಧರ್ಭದಲ್ಲಿ ನಮ್ಮ ಸಿಎಂ ಅವರ ಮಾತನ್ನ ನಾವು ನಿರೀಕ್ಷಿಸುತ್ತಿದ್ದೇವೆ. ನಮ್ಮದು ಮನವಿ ಅಲ್ಲ, ನಾವೂ ಒತ್ತಾಯ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.
ನಮಗೆ ಹೇಗೆ ನ್ಯಾಯ ಕೊಡುಸ್ತೀರಾ?
ನೀರನ್ನ ರಕ್ಷಣೆ ಮಾಡಬೇಕಾದುದ್ದು ನಮ್ಮ ಸರ್ಕಾರದ ಹೊಣೆ. ನಮಗೆ ಹೇಗೆ ನ್ಯಾಯ ಕೊಡುಸ್ತೀರಾ ಕೊಡಿ. ಈ ಕೂಡಲೇ ತುರ್ತಾಗಿ ಜಂಟಿ ಅಧಿವೇಶನ ಕರೆಯಿರಿ. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನ ತಕ್ಷಣ ನಿಲ್ಲಿಸಬೇಕು. ಕಾವೇರಿಗಾಗಿ ಸುಪ್ರೀಂಗೆ ಸಲ್ಲಿಸಿರುವ ಮೇಲ್ಮನವಿಯನ್ನ ಸಾರ್ವಜನಿಕರ ಮುಂದಿಡಬೇಕು. ಕಾವೇರಿ ನಿಯಂತ್ರಣ ಮಂಡಳಿ ಹಾಗೂ ಪ್ರಾಧಿಕಾರದ ಆದೇಶದ ಮುಂದೆ ಸಂಕಷ್ಟದ ಪರಿಸ್ಥಿತಿ ತಿಳಿಸಿ, ಸಮರ್ಥವಾದ ವಾದ ಮಂಡಿಸಬೇಕು ಎಂದು ಆಗ್ರಹಿಸಿದ್ದಾರೆ.