ವಿಜಯಪುರ : ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿ ಹಾಕಿದ್ದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ. ಮಹಾರಾಷ್ಟ್ರ ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬಸ್‌ಗೆ ಬೆಂಕಿ ಹಾಕೋದಕ್ಕೂ ಮಹಾರಾಷ್ಟ್ರ ಹೋರಾಟಕ್ಕೂ ಸಂಬಂಧವಿಲ್ಲ. ಬೇಕೆಂದೇ ನಮ್ಮ ಬಸ್‌ಗೆ ಬೆಂಕಿ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಮ್ಮ ಬಸ್‌ಗೆ ಬೆಂಕಿ ಹಾಕಿದ ಕೃತ್ಯ ಸರಿ ಇಲ್ಲ. ಮಹಾರಾಷ್ಟ್ರ ಸರ್ಕಾರ ಇದನ್ನ ಖಂಡಿಸಬೇಕು. ಬೆಂಕಿ ಇಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರ ಬಸ್‌ಗಳು ನಮ್ಮ ಕರ್ನಾಟಕಕ್ಕೂ ಬರುತ್ತವೆ. ಮಹಾರಾಷ್ಟ್ರದ ಬಸ್ ತಮಿಳುನಾಡು, ಕೇರಳ ಬೇರೆ ಬೇರೆ ರಾಜ್ಯಕ್ಕೂ ಹೋಗುತ್ತೆ ಎಂದು ಹೇಳಿದ್ದಾರೆ.
5,500 ಹೊಸ ಬಸ್ ಖರೀದಿ
ಉಚಿತ ಬಸ್ ಯೋಜನೆಯಿಂದಾಗಿ ಬಸ್ ಗದ್ದಲ ಆಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಉಚಿತ ಬಸ್ ಯೋಜನೆಗೆ ಇದು ಸಂಬಂಧವಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯವರು ಒಂದು ಹೊಸ ಬಸ್ ಖರೀದಿ ಮಾಡಿಲ್ಲ. ಕೊನೆ ವರ್ಷದಲ್ಲಿ ಹೊಸ ಬಸ್ ಖರೀದಿಗೆ ಅವರು ತೀರ್ಮಾನ ಮಾಡಿದ್ದರು. ತೀರ್ಮಾನ ತಗೊಂಡಿದ್ದು, ಕಾರ್ಯಗತ ಆಗೋದು ಲೇಟ್ ಆಯ್ತು. ನಾಲ್ಕು ವರ್ಷಗಳಲ್ಲಿ ಏನು ಮಾಡಲಿಲ್ಲ ಎಂದು ತಿಳಿಸಿದ್ದಾರೆ.
8 ಸಾವಿರ ಸಿಬ್ಬಂದಿ ನೇಮಕಾತಿ
5,500 ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ಮೊನ್ನೆ 13,800 ಹೊಸ ಬಸ್ ಖರೀದಿಗೆ ಅನುಮತಿ ಕೇಳಿದ್ದೆ. 8 ಸಾವಿರ ಬಸ್ ಖರೀದಿಗೆ ಅನುಮತಿ ಕೊಟ್ಟಿದ್ದಾರೆ. ಈಗ ಪ್ರಕ್ರಿಯೆ ಆರಂಭವಾಗಿದೆ ನಾಲ್ಕೈದು ತಿಂಗಳಲ್ಲಿ ಹೊಸ ಬಸ್ ಬರುತ್ತವೆ. ಎಂಟು ಸಾವಿರ ಸಿಬ್ಬಂದಿ ನೇಮಕಾತಿ ಆಗುತ್ತೆ. ಕ್ಯಾನ್ಸಲ್ ಆಗಿದ್ದ ಶೆಡ್ಯೂಲ್ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.