ಬೆಂಗಳೂರು : ವಿಶ್ವಕಪ್-2023 ಟೂರ್ನಿಯ 31ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಬಾಂಗ್ಲಾ ಲೆಕ್ಕಾಚಾರವನ್ನು ಪಾಕ್ ಬೌಲರ್ಗಳು ಉಲ್ಟಾ ಮಾಡಿದರು.
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 45.1 ಓವರ್ಗಳಲ್ಲಿ 204 ರನ್ ಗಳಿಸಿ ಸರ್ವಪತನ ಕಂಡಿತು. 205 ರನ್ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭಿಕರಾದ ಅಬ್ದುಲ್ ಶಫೀಕ್ ಹಾಗೂ ಫಖರ್ ಝಮಾನ್ ಬೊಂಬಾಟ್ ಆರಂಭ ನೀಡಿದರು. ಅಂತಿಮವಾಗಿ 32.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಗೆಲುವಿನ ನಗೆ ಬೀರಿತು.
ಪಾಕ್ ಸೆಮಿಸ್ ಅವಕಾಶ ಜೀವಂತ
ಪಾಕ್ ಪರ ಅಬ್ದುಲ್ ಶಫೀಕ್ (68), ಫಖರ್ ಝಮಾನ್ (81), ಬಾಬರ್ ಅಜಂ 9, ಇಫ್ತಿಕರ್ ಅಹ್ಮದ್ 17 ಹಾಗೂ ಮೊಹಮ್ಮದ್ ರಿಜ್ವಾನ್ ಅಜೇಯ 26 ರನ್ ಗಳಿಸಿದರು. ಬಾಂಗ್ಲಾದೇಶ ಪರ ಮೆಹಿದಿ ಹಸನ್ ಮಿರಾಝ್ 3 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು. ಇನ್ನೂ ಬಾಂಗ್ಲಾದೇಶ ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದ್ದು, ಪಾಕಿಸ್ತಾನದ ಸೆಮಿಸ್ ಅವಕಾಶಗಳು ಜೀವಂತವಾಗಿದೆ.