ಬೆಂಗಳೂರು : ಮಹಾರಾಷ್ಟ್ರದವರು ರಾಜಕೀಯ ದುರುದ್ದೇಶದಿಂದ ಗಡಿ ಕ್ಯಾತೆ ತೆಗೆಯುತ್ತಿದ್ದಾರೆ. ಅದಕ್ಕೆ ಯಾವುದೇ ಬೆಲೆ ಇಲ್ಲ, ಗಡಿ ವಿಚಾರ ಮುಗಿದ ಅಧ್ಯಾಯ. ಒಂದು ಇಂಚೂ ಜಾಗ ಅವರಿಗೆ ಕೊಡಲ್ಲ. ಅವರು ಮಾತನಾಡಿದ್ದಕ್ಕೆ ಬೆಲೆ ಇಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಗಡಿ ವಿಚಾರ, ಬಸ್ಗೆ ಬೆಂಕಿ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬಸ್ಗೆ ಬೆಂಕಿ ಹಚ್ಚಿದ್ದನ್ನು ತೀವ್ರವಾಗಿ ಖಂಡಿಸ್ತೇನೆ ಎಂದು ತಿಳಿಸಿದರು.
ಆ ಬಸ್ ನನ್ನ ಕ್ಷೇತ್ರದಿಂದಲೇ ಹೋಗಿರೋದು. ಬಸ್ ನಲ್ಲಿದ್ದವರಿಗೆ ಏನಾದರೂ ಅನಾಹುತ ಆಗಿದ್ದಿದ್ರೆ ಯಾರು ಜವಾಬ್ದಾರಿ? ಅದರ ಜವಾಬ್ದಾರಿ ಮಹಾರಾಷ್ಟ್ರ ಸರ್ಕಾರ, ಅಲ್ಲಿನ ಜನರೇ ವಹಿಸಿಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಮಹಾರಾಷ್ಟ್ರದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಕರ್ನಾಟಕ ಬಸ್ ಗಳನ್ನು ಸುಟ್ಟಿರೋದು ಖಂಡನೀಯ ಎಂದು ಹೇಳಿದರು.
ನಮ್ಮ ಜಿಲ್ಲಾಡಳಿತ ಪ್ರಯಾಣಿಕರ ಸಂಪರ್ಕದಲ್ಲಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆ ತರುವ ವ್ಯವಸ್ಥೆ ಮಾಡಿದ್ದಾರೆ. ಕೆಲವರು ಪೂನಾಕ್ಕೆ ಹೋಗೋರಿದ್ರು, ಅವರಿಗೆ ಸುರಕ್ಷಿತವಾಗಿ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ಮಾಹಿತಿ ನೀಡಿದರು.