Wednesday, January 22, 2025

ನಾನೂ ರೈತ ಹೋರಾಟದಲ್ಲಿ ಬಂದಿರುವ ರೈತರ ಮಗ : ಸಿದ್ದರಾಮಯ್ಯ

ಮಂಡ್ಯ : ನಾನೂ ರೈತ ಹೋರಾಟದಲ್ಲಿ ಬಂದಿರುವ ರೈತರ ಮಗ. ನಾವೂ ಅಚ್ಚುಕಟ್ಟು ಪ್ರದೇಶದಲ್ಲೇ ಇದ್ದೇವೆ. ಆದ್ದರಿಂದ ರೈತರ ಸಂಕಷ್ಟ ನನಗೆ ಚೆನ್ನಾಗಿ ಗೊತ್ತಿದೆ. ಕಬ್ಬು ಬೆಳೆಗಾರರ ಹಿತಕ್ಕಾಗಿ ಮೈಶುಗರ್ ಸಕ್ಕರೆ ಕಾರ್ಖಾನೆಗೆ 50 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ನಾವು ನಿಮ್ಮ ಪರವಾಗಿ ಇರುವವರು. ಈ ವಿಷಯದಲ್ಲಿ ಅನುಮಾನವೇ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಹಲವು ಸಂಘಟನೆಗಳ ಒಕ್ಕೂಟ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪ್ರತಿಭಟನಾಕಾರರ ಮನವಿ ಪತ್ರ ಸ್ವೀಕರಿಸಿ ಅವರು ಮಾತನಾಡಿದರು.‌ ನಾವು ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ಅಧಿಕಾರಕ್ಕಿಂತ ರೈತರ ಹಿತಾಸಕ್ತಿ ಕಾಪಾಡುವುದು ನಮಗೆ ಮುಖ್ಯ. ಎಂತಹುದ್ದೇ ಪರಿಸ್ಥಿತಿ ಬಂದರೂ ರೈತರ ಹಿತ ಕಾಯುವುದು ಶತಸಿದ್ಧ ಎಂದರು.

ನಾವು ಕುಡಿಯುವ ನೀರಿಗೆ ಮತ್ತು ಬೆಳೆ ಉಳಿಸಿಕೊಳ್ಳಲು ಮೊದಲ ಆದ್ಯತೆ ನೀಡುತ್ತೇವೆ. ಮುಂಗಾರು ಬೆಳೆಯನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತೇವೆ. ಆದ್ದರಿಂದ ನಿಮ್ಮ ಹಿತ ಕಾಯಲು ಹಿಂದೆ ಬೀಳುವುದಿಲ್ಲ. ಅಧಿಕಾರಕ್ಕಾಗಿ ರೈತರನ್ನು ಬಲಿ ಕೊಡುವುದಿಲ್ಲ. ನಾವು ಕೇವಲ ಅಧಿಕಾರಕ್ಕಾಗಿ ಅಂಟಿಕೊಂಡು ಕೂರುವವರಲ್ಲ. ರೈತರ ಹಿತ ಕಾಯಲು ಗಂಭೀರವಾದ, ಪ್ರಾಯೋಗಿಕವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕು ಎನ್ನುವ ಆದೇಶ ಹೊರಬಿದ್ದಿದೆ. ಪ್ರತಿ ತಿಂಗಳು ಇಷ್ಟಿಷ್ಟು ನೀರು ಬಿಡಬೇಕು ಎನ್ನುವ ಆದೇಶ ಇದೆ. ನಾವು ಕಾವೇರಿ ಪ್ರಾಧಿಕಾರ ಮತ್ತು ಸಮಿತಿ ಎದುರು ನೀರಿಲ್ಲ. ಆದ್ದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ನಮ್ಮ ವಾದವನ್ನು ಬಲವಾಗಿ ಮಂಡಿಸಿದ್ದೇವೆ. ಆದರೂ ಮೊದಲು 5,000 ಕ್ಯೂಸೆಕ್ಸ್ ನೀರು ಬಿಡಲು ಹೇಳಿದರು. ಬಳಿಕ 3,000 ಕ್ಯೂಸೆಕ್ಸ್ ನೀರು ಬಿಡಲು ಆದೇಶ ಬಂತು. ಅದಕ್ಕೂ ನಾವು ಒಪ್ಪಲಿಲ್ಲ. ಈಗ ನಿನ್ನೆ 2,600 ಕ್ಯೂಸೆಕ್ಸ್ ನೀರು ಬಿಡಲು ಆದೇಶವಾಗಿದೆ ಎಂದು ಬೇಸರಿಸಿದರು.

RELATED ARTICLES

Related Articles

TRENDING ARTICLES