ಹಾವೇರಿ : ನಟ ದರ್ಶನ್ ಅವರಿಗೆ ಸ್ನೇಹಿತರ ಬಗ್ಗೆ ಮೊದಲಿಂದಲೂ ಒಳ್ಳೆಯ ಗುಣ ಇದೆ. ನನ್ನ ಜೊತೆ ಇರುವವರು ಬೆಳೆಯಲಿ ಎಂದು ಹೇಳುವ ಮನಸ್ಸು ಯಾರಿಗೂ ಇರುವುದಿಲ್ಲ. ಅದಕ್ಕೆ ಅಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದರು.
ಹಾವೇರಿಯಲ್ಲಿ ಗರಡಿ ಸಿನಿಮಾ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದರ್ಶನ ಸಾಹೇಬ್ರು ಸಿಕ್ಕರು ಹೊಸ ನಟನನ್ನು ಕರಕೊಂಡು ಬಂದ್ರು ಎಂದು ತಿಳಿಸಿದರು.
ಈ ಊರಿಗೆ, ನನ್ನ ಮಣ್ಣಿಗೆ ನಮಸ್ಕಾರ ಎಂದು ಮಾತು ಆರಂಭಿಸಿದ ಯೋಗರಾಜ್ ಭಟ್ ಅವರು, ದೊಡ್ಡ ದೊಡ್ಡ ನಾಯಕರನ್ನು ತಯಾರು ಮಾಡಿದ್ದು ಬಯಲು ಸೀಮೆ. ರಿಯಾಲಿಟಿ ಶೋ, ಗ್ರ್ಯಾಂಡ್ ಫಿನಾಲೆ ಈ ಭಾಗದಲ್ಲೇ ನಡೆಯುತ್ತಲೇ ಇದ್ದಾವೆ. ಮನೆಗೆ ಬಂದಷ್ಟೇ ಖುಷಿ ಆಗೈತಿ, ನವೆಂಬರ್ 1ಕ್ಕೆ ಎಲ್ಲರೂ ಬನ್ನಿ ಎಂದು ಮನವಿ ಮಾಡಿದರು.
ಕ್ಯಾಮೆರಾ ಇಟ್ಟರೆ ಕ್ಯಾಮೆರಾನೇ ಸಾಲೋದಿಲ್ಲ
ಬಾದಾಮಿಯಲ್ಲೇ ಗರಡಿ ಸಿನಿಮಾ ಹುಟ್ಟಿದ್ದು. ಗರಡಿ ಸಿನಿಮಾ ದೇಸಿ ಕಲೆ ಇರುವಂತದ್ದು. ಬದುಕಿನಲ್ಲಿ ಯಾರಿಗೆ ಆದರೂ ಗರಡಿ ಥರ ಹಿನ್ನಲೆಯ ಕಥೆ ಇರುತ್ತದೆ. ಆ ಎತ್ತರ, ಡೈಲಾಗ್ ನೋಡಿದ್ರೆ ಖಂಡಿತಾ ಕರೆಂಟ್ ಪಾಸ್ ಆಗುತ್ತದೆ. ನಾನು ಕ್ಯಾಮೆರಾ ಇಟ್ಟರೆ.. ಕ್ಯಾಮೆರಾನೇ ಸಾಲೋದಿಲ್ಲ, ಅಂತಹ ಇಮೇಜ್ ದರ್ಶನ್ ಮೇಲೆ ಇದೆ. ಗರಡಿ ಸಿನಿಮಾ ಕಥೆ ಹಳೆ ಮೈಸೂರ ಭಾಗದಲ್ಲಿ ನಡೆದಿರುವಂತದ್ದು ಎಂದು ಯೋಗರಾಜ್ ಭಟ್ ಹೇಳಿದರು.