ಧರ್ಮಸ್ಥಳ : ಯಾವುದೇ ಕಾರಣಕ್ಕೂ ದೇಶದ ಸಂಸ್ಕೃತಿ ನಾಶ ಮಾಡಲು ಬಿಡಬೇಡಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕರೆ ಕೊಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಧರ್ಮಸಂರಕ್ಷಣಾ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನೀವೆಲ್ಲ ಧರ್ಮ ಸೈನಿಕರು. ನಾನು ಇಲ್ಲಿ ನಿಂತಿರುವುದು ನಿಮ್ಮ ಕೋರಿಕೆಯ ಮೇರೆಗೆ. ಇದು ನನ್ನ ಕಾರ್ಯಕ್ರಮವಲ್ಲ. ನಿಮ್ಮ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೇನೆ. ಅವಕಾಶಕೊಟ್ಟಿದ್ದಕ್ಕೆ ಧನ್ಯವಾದಗಳು. ಇಲ್ಲಿ ನೀವೆ ದೇವತೆಗಳು. ಧರ್ಮ ಸಂರಕ್ಷಣೆಗೆ ಬಂದವರನ್ನು ಧರ್ಮ ಸೈನಿಕರು ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಇಲ್ಲಿ ಬಂದವರು ನಮ್ಮಿಂದ ಯಾವ ಸಹಾಯವನ್ನೂ ಆಪೇಕ್ಷಿಸಲಿಲ್ಲ. ನಮ್ಮ ವಾಹನವನ್ನೂ ಆಪೇಕ್ಷಿಸಲಿಲ್ಲ. ಯಾವುದೇ ಕಾರಣಕ್ಕೂ ದೇಶದ ಸಂಸ್ಕೃತಿ ನಾಶ ಮಾಡಲು ಬಿಡಬೇಡಿ. ಮಂಜುನಾಥ ಸ್ವಾಮಿ ವಿಷಕಂಠ ಸ್ವಾಮಿ. ವಿಷವನ್ನು ಸ್ವೀಕರಿಸಲು ನಾವು ಇದ್ದೇವೆ. ನೀನು ನಮ್ಮನ್ನು ರಕ್ಷಣೆ ಮಾಡಬೇಕು. ಸಮಾಜದ ಸ್ವಾಸ್ತ್ಯವನ್ನು ರಕ್ಷಣೆ ಮಾಡುವ ಕೆಲಸ ಮಾಡಬೇಕು. ನಮ್ಮಲ್ಲಿ ಕಲ್ಮಶವಿಲ್ಲ, ಹೃದಯದಲ್ಲಿ ಯಾವುದೇ ಕಲ್ಮಶವಿಲ್ಲ ಎಂದು ತಿಳಿಸಿದರು.
ನೀವು ಏನು ಬೇಕಾದರೂ ತನಿಖೆ ಮಾಡಲಿ
ನೀವು ಏನು ಬೇಕಾದರೂ ತನಿಖೆ ಮಾಡಲಿ, ಯಾವುದು ಬೇಕಾದರೂ ತನಿಖೆ ಮಾಡಲಿ. ನ್ಯಾಯಾಂಗದ ಮುಂದೆ ಎಲ್ಲರೂ ತಲೆ ಬಗ್ಗಿಸಬೇಕು. ಕಾನೂನು ಬಿಟ್ಟು ಯಾರೂ ಮಾತನಾಡಬಾರದು. ನಮ್ಮ ವಿರುದ್ಧ ಯಾವುದೇ ತನಿಖೆ ಮಾಡಲಿ. ನೀವು ಇಲ್ಲ ಸತ್ಯಶೋಧನೆಗಾಗಿ ಬಂದಿದ್ದೀರಿ. ನಮ್ಮೆಲ್ಲರ ಹಿಂದೆ ಮಂಜುನಾಥನಿದ್ದಾನೆ ಎಂದು ಹೇಳಿದರು.