ಹುಬ್ಬಳ್ಳಿ : ಡಿ.ಕೆ ಶಿವಕುಮಾರ್ ಪ್ರಾಮುಖ್ಯತೆ ಕಡಿಮೆ ಮಾಡಲು ಸಿದ್ದರಾಮಯ್ಯ ಡ್ರಾಮಾ ನಡೆಸಿದ್ದಾರೆ. ಇನ್ನೂ ಎರಡುವರೆ ವರ್ಷಕ್ಕೆ ಹಾಗೂ ಲೋಕಸಭಾ ಚುನಾವಣೆ ಬಳಿಕ ಡಿಕೆಶಿಗೆ ಅಧಿಕಾರ ಬಿಟ್ಟುಕೊಡಬೇಕು ಅಂತ ಸಿದ್ದರಾಮಯ್ಯ ಈ ನಾಟಕ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಕಾಂಗ್ರೆಸ್ಗೆ ಅಧಿಕಾರ ಕೊಟ್ಟಿದ್ದಾರೆ, ಐದು ವರ್ಷ ನಡೆಸಲಿ. ಆದರೆ, ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬಾಲಿಶ ಹೇಳಿಕೆ ನೀಡೋದು ಬಿಡಬೇಕು. ಐದಾರು ಸ್ಥಾನಗಳು ಕಡಿಮೆ ಇದ್ರೆ ಸರ್ಕಾರ ರಚನೆ ಬಗ್ಗೆ ಯೋಚನೆ ಮಾಡಬಹುದು. ಆದ್ರೆ, 70 ಶಾಸಕರನ್ನು ಕರೆದುಕೊಂಡು ಯಾರು ಸರ್ಕಾರ ರಚನೆ ಮಾಡಲು ಯೋಚನೆ ಮಾಡುತ್ತಿದ್ದಾರೆ. ಇದು ಸಾಧ್ಯನಾ? ಎಂದು ಚಾಟಿ ಬೀಸಿದರು.
ಕಾಂಗ್ರೆಸ್ ಪಾರ್ಟಿ ಗೊಂದಲದಿಂದ ರಾಜ್ಯದ ಜನ ಅಂತಂತ್ರ ವಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಇನ್ನೂ ಎರಡು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ ಹೊರಟಿದ್ದಾರೆ. ಡಿಸಿಎಂ ಬಿಟ್ಟು ಸಭೆ ಮಾಡುವ ಸ್ಥಿತಿಗೆ ಸಿದ್ದರಾಮಯ್ಯ ತಲುಪಿದ್ದಾರೆ. ಇದು ರಾಜಕೀಯ ಹೈಡ್ರಾಮಾ ಕಾಂಗ್ರೆಸಿನಲ್ಲಿ ನಿತ್ಯ ಭಿನ್ನಮತ ಹೆಚ್ಚಾಗುತ್ತಿದೆ ಅಧಿಕಾರಕ್ಕಾಗಿ ಒಳ ಜಗಳ ನಡೆಯುತ್ತಿದೆ. ಇದನ್ನು ಡೈವರ್ಟ್ ಮಾಡಲು ಹುಲಿ ಉಗುರು ಪೆಂಡೆಂಟ್ ವಿಚಾರ ತಂದಿದ್ದಾರೆ. ಇದು ದೊಡ್ಡ ಡ್ರಾಮಾ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರ ತೆಗೆಯುವ ಚಿಂತನೆ ಇಲ್ಲ
ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಜಗಳ ತಾರಕಕ್ಕೇರಿದೆ. ಇದನ್ನು ಡೈವರ್ಟ್ ಮಾಡಲು ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸರ್ಕಾರವನ್ನು ತೆಗೆಯಲು ಬಿಜೆಪಿ ಯಾವುದೇ ಚಿಂತನೆ ಮಾಡಿಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದರು.