Wednesday, June 26, 2024

ಮೋದಿ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆಯೇ? : ಸಿದ್ದರಾಮಯ್ಯ

ಬೆಂಗಳೂರು : ಕೃಷ್ಣ ಮೇಲ್ದಂಡೆ ಯೋಜನೆಯ ಅನುದಾನದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆಯೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, ಶೇ.60 ಅನುದಾನವನ್ನು ಒದಗಿಸಬೇಕೆಂದು ಕನ್ನಡಿಗರು ಕೇಂದ್ರವನ್ನು ಒತ್ತಾಯಿಸುತ್ತಲೇ ಇದ್ದಾರೆ ಎಂದು ಹೇಳಿದ್ದಾರೆ.

2017ರಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಯೋಜನಾ ವೆಚ್ಚ ರೂ. 51,148 ಕೋಟಿ ಇದ್ದುದ್ದು ಈಗ ರೂ. 78 ಸಾವಿರ ಕೋಟಿಗೂ ಮೀರಿದೆ. ರಾಜ್ಯ ಸರ್ಕಾರ ವಾರ್ಷಿಕ ರೂ. 10,000 ದಿಂದ ರೂ.15,000 ಕೋಟಿ ಅನುದಾನ ನೀಡಿದರೂ ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ಈಗಿನ ವೆಚ್ಚವೂ ದುಪ್ಪಟ್ಟಾಗಲಿದೆ. ಆದ್ದರಿಂದ ಶೇ.60 ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕನ್ನಡಿಗರಿಗೆ ನ್ಯಾಯ ಒದಗಿಸುವಿರಾ?

ಪ್ರಧಾನಿ ನರೇಂದ್ರ ಮೋದಿ ಅವರೇ, ಕಳೆದ ನಾಲ್ಕು ವರ್ಷ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ನಿಮ್ಮದೇ ಪಕ್ಷದ ಡಬ್ಬಲ್ ಇಂಜಿನ್‌ ಸರ್ಕಾರವಿತ್ತು. ಆಗಲೂ ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸದೆ ಜನರನ್ನು ಮೂರ್ಖರನ್ನಾಗಿಸಿದಿರಿ. ಹನಿ ನೀರಿಗಾಗಿ ನಾಡಿನ ರೈತರು ಇನ್ನೆಷ್ಟು ವರ್ಷ ನಿಮ್ಮ ಬಳಿ ಅಂಗಲಾಚಬೇಕು? ಈಗಲಾದರೂ ಕನ್ನಡಿಗರಿಗೆ ನ್ಯಾಯ ಒದಗಿಸುವಿರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ

ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಎಂದು ಸಿದ್ದರಾಮಯ್ಯ ಅವರು ಪೋಸ್ಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES