ಬೆಂಗಳೂರು : ಆಡಳಿತರೂಢ ಕಾಂಗ್ರೆಸ್ ಪಕ್ಷದ ಮೇಲೆ ಕಮಿಷನ್ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಸಂಕಷ್ಟ ಎದುರಾಗಿದ್ದು, ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿದೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದರು. ಕಾಂಗ್ರೆಸ್ ಸರ್ಕಾರ ಹಲವು ಇಲಾಖೆಗಳಲ್ಲಿ ಕಮಿಷನ್ ಪಡೆಯುತ್ತಿರುವ ಬಗ್ಗೆ ಆರೋಪಿಸಿ, ಈ ಕುರಿತು ಪೆನ್ಡ್ರೈವ್ ನನ್ನ ಬಳಿ ಇದೆ ಎಂದಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಮಾಹಿತಿಯನ್ನು ನೀಡದ ಹಿನ್ನಲೆ ವಕೀಲ ಅಮೃತೇಶ್ ಎಂಬುವವರು ಹೆಚ್ಡಿಕೆ ವಿರುದ್ಧ ವಿಧಾನ ಸೌಧ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಪೆನ್ಡ್ರೈವ್ ತೋರಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ ನೀಡಲಾಗಿತ್ತು. ಆದರೆ, ಇದ್ಯಾವುದಕ್ಕೂ ಉತ್ತರ ಬಂದಿಲ್ಲ. ಪೆನ್ ಡ್ರೈವ್ನ್ನ ಸ್ಪೀಕರ್ಗೆ ಅಥವಾ ಪೊಲೀಸರಿಗೆ ಆಗಲಿ ಇನ್ನೂ ನೀಡಿಲ್ಲ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದವರು. ಈ ರೀತಿ ಮಾಡಿರುವುದು ಸರಿಯಲ್ಲ. ಈ ಹಿನ್ನಲೆ ಕುಮಾರಸ್ವಾಮಿ ವಿರುದ್ದ ಬ್ಲಾಕ್ ಮೇಲ್, ಬೆದರಿಕೆ, ಅಪರಾಧಿಕ ಸಂಚು ಹಾಗೂ ಎಕ್ಸ್ ಟಾರ್ಷನ್ ಆರೋಪದಡಿ ಕ್ರಮ ತೆಗೆದುಕೊಂಡು, ಜೊತೆಗೆ ಕುಮಾರಸ್ವಾಮಿಯವರ ಬಳಿ ಇರುವ ಪೆನ್ ಡ್ರೈವ್ ಸೀಜ್ ಮಾಡಬೇಕು ಮತ್ತು ಅವರ ವಿರುದ್ಧ ಕ್ರಮತೆಗದುಕೊಳ್ಳುವಂತೆ ವಕೀಲ ಅಮೃತೇಶ್ ಅವರಿಂದ ವಿಧಾನ ಸೌಧ ಠಾಣೆಗೆ ದೂರು ನೀಡಿದ್ದಾರೆ.