ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಕರ ಲಗ್ನದಲ್ಲಿ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿದರು.
ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಡಾ.ಹೆಚ್.ಸಿ. ಸಚಿವ ಮಹದೇವಪ್ಪ, ಸಚಿವರಾದ ಕೆ.ಹೆಚ್. ಮುನಿಯಪ್ಪ, ವೆಂಕಟೇಶ್, ಶಿವರಾಜ್ ತಂಗಡಗಿ, ಕೆ.ಎನ್.ರಾಜಣ್ಣ, ಭೈರತಿ ಸುರೇಶ್ ಹಾಗೂ ಸಂಸದ ಪ್ರತಾಪ್ ಸಿಂಹ ಉಪಸ್ಥಿತರಿದ್ದರು.
ಇನ್ನೂ ಐತಿಹಾಸಿಕ ದಸರಾಗೆ ಮಲ್ಲಿಗೆ ನಗರಿ ಮೈಸೂರು ಸಜ್ಜಾಗಿದೆ. ಇಂದು ಜಗತ್ಫ್ರಸಿದ್ದ ಜಂಬೂ ಸವಾರಿ ನಡೆಯಲಿದ್ದು, ಅರಮನೆ ಆವರಣದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಂಜೆ 4.40 ರಿಂದ 5 ಗಂಟೆಯ ನಡುವೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ರಾಜವಂಶಸ್ಥರು, ಮೇಯರ್ ಶಿವಕುಮಾರ್, ಡಿಸಿ ಕೆ.ವಿ. ರಾಜೇಂದ್ರ, ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ನ್ಯಾಯಾಧೀಶರು, ಡಿಸಿಎಫ್ ಹಾಗೂ ಗಣ್ಯರು ಭಾಗಿಯಾಗಲಿದ್ದಾರೆ.
4,300 ಪೊಲೀಸ್ ಅಧಿಕಾರಿಗಳ ನಿಯೋಜನೆ
ನಾಡಹಬ್ಬದ ಮೇಲೆ ಉಗ್ರರು ಕಣ್ಣಿಟ್ಟಿದ್ದು, ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಆತಂಕ ಸಹ ಇದ್ದು, ಪೊಲೀಸರು ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ. ದಸರಾ ಮಹೋತ್ಸವಕ್ಕೆ 4,300 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ನೇತೃತ್ವವಹಿಸಿದ್ದು, ದಕ್ಷಿಣ ವಲಯ ಐಜಿಪಿ, 11 SP ಸೇರಿದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.
ಒಟ್ಟಿನಲ್ಲಿ, ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡಿ ಮಾತೆ ವಿರಾಜಮಾನಳಾಗ್ತಿದ್ದಾಳೆ. ಈ ಸುಮಧುರ ಸನ್ನಿವೇಶಗಳನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯ್ತಿದ್ದಾರೆ. ಚಿನ್ನದ ಅಂಬಾರಿಯನ್ನ ಹೊತ್ತು ಆನೆ ಅಭಿಮನ್ಯು ಆ್ಯಂಡ್ ಟೀಂ ಸಾಗಲಿದೆ.