ಬೆಂಗಳೂರು : ಡ್ರಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಬಾಲಿವುಡ್ನ ಜನಪ್ರಿಯ ಹಿರಿಯ ನಟ ದಲೀಪ್ ತಾಹೀಲ್ಗೆ ಬಹುದೊಡ್ಡ ಸಂಕಷ್ಟ ಎದುರಾಗಿದ್ದು, ಎರಡು ತಿಂಗಳ ಜೈಲು ಶಿಕ್ಷೆಯಾಗಿದೆ.
ಮಹಾರಾಷ್ಟ್ರದ ಬಾಂದ್ರಾದ ಅಡಿಷನಲ್ ಚೀಫ್ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್, 500 ರೂಪಾಯಿ ದಂಡದ ಜೊತೆ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಜೊತೆಗೆ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಗೆ 5 ಸಾವಿರ ರೂಪಾಯಿ ಪರಿಹಾರ ನೀಡುವಂತೆಯೂ ಸೂಚನೆ ನೀಡಿದೆ.
ದಲೀಪ್ ವಿರುದ್ಧ 2018ರಲ್ಲಿ ಹಿಟ್ ಅಂಡ್ ರನ್ ಕೇಸ್ ದಾಖಲಾಗಿತ್ತು. ನಟ ಚಲಾಯಿಸುತ್ತಿದ್ದ ಕಾರು, ಆಟೋಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಮಹಿಳೆಯೊಬ್ಬರು ಗಾಯಗೊಂಡಿದ್ದರು. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ತಪಾಸಣೆಗೆ ಒಳಪಡಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ನಟ ದಲೀಪ್ ಮದ್ಯ ಸೇವನೆ ಮಾಡಿರೋದು ಸಾಬೀತಾಗಿತ್ತು.
ತೀರ್ಪನ್ನು ಪ್ರಶ್ನೆ ಮಾಡುತ್ತೇನೆ
ನಿನ್ನೆಯ ಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ದಲೀಪ್ ಮುಂಬೈನ ಸೆಷನ್ಸ್ ಕೋರ್ಟ್ಗೆ ಹೋಗಲು ನಿರ್ಧರಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಮೇಲೆ ನಮಗೆ ಗೌರವ ಇದೆ. ಅದನ್ನು ಕಾಪಾಡಿಕೊಂಡು ಬರುತ್ತೇನೆ. ಆದರೆ ಕೋರ್ಟ್ನ ತೀರ್ಪನ್ನು ಪ್ರಶ್ನೆ ಮಾಡುತ್ತೇನೆ ಎಂದು ದಲೀಪ್ ಹೇಳಿದ್ದಾರೆ.