Monday, December 23, 2024

ಪದವೀಧರರು, ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ: ಜಿಲ್ಲಾಧಿಕಾರಿ ಡಾ.ಶಿವಶಂಕರ

ಬೆಂಗಳೂರು ಗ್ರಾಮಾಂತರ ಜಿಲ್ಲೆ: ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಮತ್ತು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ರವರ ಸಾರ್ವಜನಿಕ ಪ್ರಕಟಣೆಯಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆ-2023ರ ಸಂಬಂಧ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದಂತೆ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನು ಸೆಪ್ಟೆಂಬರ್ 30 ರಂದು ಹೊರಡಿಸಲಾಗಿದೆ.

ಅಕ್ಟೋಬರ್ 01 ರಿಂದ ನವೆಂಬರ್ 06 ರ ವರೆಗೆ ನಮೂನೆ-19 ಹಾಗೂ ನಮೂನೆ-18 ರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ. ಎನ್ ಅವರು ತಿಳಿಸಿದ್ದಾರೆ.

ನವೆಂಬರ್ 11 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ನವೆಂಬರ್ 23 ರಿಂದ ಡಿಸೆಂಬರ್ 12 ರ ಒಳಗಾಗಿ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಡಿಸೆಂಬರ್ 30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಮತದಾರರ ಪಟ್ಟಿಗಳ ಸೇರ್ಪಡೆಗೆ ನವೆಂಬರ್ 01 ಅರ್ಹತಾ ದಿನಾಂಕವಾಗಿರುತ್ತದೆ.

ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ನೋಂದಾಯಿಸಲು ಮಾನದಂಡಗಳು: 

  • ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ಸಾಮಾನ್ಯ ನಿವಾಸಿ ಆಗಿರಬೇಕು (ಈ ಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಗಳು ಒಳಗೊಂಡಿರುತ್ತದೆ),
  • ಅರ್ಹತಾ ದಿನಾಂಕ ಅಂದರೆ 01.11. 2023 ಕ್ಕಿಂತ ಹಿಂದಿನ 6 ವರ್ಷಗಳ ಅವಧಿಯ ಪೈಕಿ ಕನಿಷ್ಟ 3 ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಹೊಂದಿರುವ ಮಾನ್ಯತೆ ಹೊಂದಿರುವುದಾಗಿ ಘೋಷಿಸಲ್ಪಟ್ಟಿರುವ ಸೆಕೆಂಡರಿ ಶಾಲೆಗಿಂತ ಕಡಿಮೆ ಇಲ್ಲದ ಯಾವುದೇ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ವೃತ್ತಿಯಲ್ಲಿ ಕಾರ್ಯ ನಿರ್ವಹಿಸಿರಬೇಕು.
  • ಸೆಕೆಂಡರಿ ಶಾಲೆ ಅಂದರೆ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿನ ಪ್ರೌಢಶಾಲೆ ವಿಭಾಗದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿರಬೇಕು.
  • ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಖಾಯಂ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರಬೇಕು ಹಾಗೂ ಪಾರ್ಟ್ ಟೈಂ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಲ್ಲಿ ನೋಂದಣಿಗೆ ಅವಕಾಶವಿರುವುದಿಲ್ಲ.
  • ಅರ್ಜಿದಾರರು ಮೇಲೆ ತಿಳಿಸಿರುವ ಅವಧಿಯಲ್ಲಿ ಶಿಕ್ಷಕ ವೃತ್ತಿಯಲ್ಲಿ ತೊಡಗಿರುವ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಂದ ದೃಢೀಕೃತ ದಾಖಲೆ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
  • ಮತದಾರರ ಪಟ್ಟಿ ನೋಂದಣಿಗೆ ಅರ್ಜಿದಾರರ ವಾಸಸ್ಥಳವು ಅರ್ಹತೆಯಾಗಿದ್ದು, ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಯ ಸ್ಥಳವು ಪರಿಗಣಿಸಲ್ಪಡುವುದಿಲ್ಲ.
  • ಮತದಾರರ ಪಟ್ಟಿ ಸೇರ್ಪಡೆಗೆ ಕನ್ನಡ ಅಥವಾ ಆಂಗ್ಲ ಭಾಷೆಯ ನಮೂನೆ-19 ರಲ್ಲಿ ಅರ್ಜಿ ಸಲ್ಲಿಸಬಹುದು.
  • ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುವುದರಿಂದ ಅರ್ಜಿದಾರರು ಇತ್ತೀಚಿನ 02 ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
  • ಭಾರತ ಚುನಾವಣಾ ಆಯೋಗವು ಸಿದ್ಧಪಡಿಸಿರುವ ಹೆಚ್ಚುವರಿ ಮಾಹಿತಿ ಅಂದರೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವ ಬಗ್ಗೆ ವಿಧಾನಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು, ಮತಗಟ್ಟೆ ಸಂಖ್ಯೆ, ಗುರುತಿನ ಚೀಟಿ (ಎಪಿಕ್) ಸಂಖ್ಯೆ, ಹುಟ್ಟಿದ ದಿನಾಂಕ, ಸಂಪರ್ಕ (ದೂರವಾಣಿ ಮೊಬೈಲ್ ನಂ) ವಿವರವನ್ನು ಸಹ ಅರ್ಜಿದಾರರು ನಮೂನೆ-19 ರೊಂದಿಗೆ ತಪ್ಪದೇ ಕಡ್ಡಾಯವಾಗಿ ಸಲ್ಲಿಸಬೇಕು.
  • ಭರ್ತಿ ಮಾಡಿ ನಮೂನೆ-19ರ ಅರ್ಜಿಯನ್ನು ಪೂರಕ ಪ್ರಮಾಣಪತ್ರ/ದಾಖಲೆಗಳೊಂದಿಗೆ ತಾಲ್ಲೂಕು ಕಛೇರಿ, ಉಪವಿಭಾಗ ಕಛೇರಿ ಹಾಗೂ ಜಿಲ್ಲಾಧಿಕಾರಿ ಕಛೇರಿಗೂ ಸಲ್ಲಿಸಬಹುದಾಗಿದೆ. ಆದರೆ ಯಾವುದೇ ವ್ಯಕ್ತಿ ಬಲ್ಕ್ ಆಗಿ ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಆಯಾ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಅರ್ಜಿಗಳನ್ನು ಪಟ್ಟಿಯೊಂದಿಗೆ ಸಲ್ಲಿಸಬಹುದಾಗಿದೆ.

ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ನೋಂದಾಯಿಸಲು ಮಾನದಂಡಗಳು:

  • ಬೆಂಗಳೂರು ಪದವೀಧರ ಕ್ಷೇತ್ರದ ವ್ಯಾಪ್ತಿಯ ಸಾಮಾನ್ಯ ನಿವಾಸಿ ಆಗಿರಬೇಕು (ಈ ಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಗಳು ಒಳಗೊಂಡಿರುತ್ತದೆ)
  • ಅರ್ಹತಾ ದಿನಾಂಕದ ಮೊದಲು ಕನಿಷ್ಟ ಮೂರು ವರ್ಷಗಳ ಕಾಲ, ಭಾರತದ ಭೂಪ್ರದೇಶದಲ್ಲಿರುವ ವಿಶ್ವವಿದ್ಯಾಲಯದ ಪದವೀಧರರಾಗಿರಬೇಕು ಅಥವಾ ಸೆಕ್ಷನ್ 27ರ ಉಪ-ವಿಭಾಗ (3) ರ ಷರತ್ತು (ಎ) ಅಡಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಪದವೀಧರರಾಗಿ ಅರ್ಹತೆಗಳನ್ನು ಹೊಂದಿರಬೇಕು.
  • ಮತದಾರರ ಪಟ್ಟಿ ನೋಂದಣಿಗೆ ಅರ್ಜಿದಾರರು ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ವಾಸವಾಗಿರುವುದು ಅರ್ಹತೆಯಾಗಿರುತ್ತದೆ.
  • ಪದವೀಧರ ಕ್ಷೇತ್ರದ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಜಿಯನ್ನು ಕನ್ನಡ ಅಥವಾ ಅಂಗ್ಲ ಭಾಷೆಯ ನಮೂನೆ-18 ರಲ್ಲಿ ಅರ್ಜಿ ಸಲ್ಲಿಸಬಹುದು.
  • ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುವುದರಿಂದ ಅರ್ಜಿದಾರರು 02 ಇತ್ತೀಚಿನ ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
  • ಭಾರತ ಚುನಾವಣಾ ಆಯೋಗವು ಸಿದ್ಧಪಡಿಸಿರುವ ಹೆಚ್ಚುವರಿ ಮಾಹಿತಿ ಅಂದರೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವ ಬಗ್ಗೆ ವಿಧಾನಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು, ಮತಗಟ್ಟೆ ಸಂಖ್ಯೆ, ಗುರುತಿನ ಚೀಟಿ (ಎಪಿಕ್) ಸಂಖ್ಯೆ, ಹುಟ್ಟಿದ ದಿನಾಂಕ, ಸಂಪರ್ಕ (ದೂರವಾಣಿ/ಮೊಬೈಲ್ ನಂ), ಆಧಾರ್ ವಿವರವನ್ನು ಸಹ ಅರ್ಜಿದಾರರು ನಮೂನೆ-18 ರೊಂದಿಗೆ ತಪ್ಪದೇ ಕಡ್ಡಾಯವಾಗಿ ಸಲ್ಲಿಸಬೇಕು.
  • ಭರ್ತಿ ಮಾಡಿ ನಮೂನೆ-18 ರ ಅರ್ಜಿಯನ್ನು ಪೂರಕ ಪ್ರಮಾಣಪತ್ರ/ದಾಖಲೆಗಳೊಂದಿಗೆ ತಾಲ್ಲೂಕು ಕಛೇರಿ, ಉಪವಿಭಾಗಾಧಿಕಾರಿಗಳ ಕಛೇರಿ ಹಾಗೂ ಜಿಲ್ಲಾಧಿಕಾರಿ ಕಛೇರಿಗೂ ಸಲ್ಲಿಸಬಹುದಾಗಿದೆ. ಆದರೆ ಯಾವುದೇ ವ್ಯಕ್ತಿ ಬಲ್ಕ್ ಆಗಿ ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಆದರೆ ಕುಟುಂಬದ ಮುಖ್ಯಸ್ಥರು ಅರ್ಜಿಗಳನ್ನು ಪಟ್ಟಿಯೊಂದಿಗೆ ಸಲ್ಲಿಸಬಹುದಾಗಿದೆ.
  • ಮೇಲೆ ತಿಳಿಸಿರುವ ಮಾರ್ಗಸೂಚಿಗಳಡಿಯಲ್ಲಿ ಸಾರ್ವಜನಿಕರು ಹಾಗೂ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಹಾಗೂ ಮೇಲಿನ ಮಾನದಂಡಗಳಡಿಯಲ್ಲಿ ಅರ್ಹತೆ ಹೊಂದಿರುವ ಪದವೀಧರರು ಹಾಗೂ ಶಿಕ್ಷಕರಿಂದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವ ಸುವರ್ಣಾವಕಾಶವನ್ನು ಉಪಯೋಗಿಸಿಕೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಚುನಾವಣಾಧಿಕಾರಿ ಡಾ.ಶಿವಶಂಕರ ಎನ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

RELATED ARTICLES

Related Articles

TRENDING ARTICLES