ಬಾಗಲಕೋಟೆ : ಡಿಸಿಎಂ ಡಿ.ಕೆ. ಶಿವಕುಮಾರ್ ಅವರದ್ದು ಒಂದು ಗ್ಯಾಂಗ್, ಸಿಎಂ ಸಿದ್ದರಾಮಯ್ಯರದ್ದು ಒಂದು ಗ್ಯಾಂಗ್. ಇದರ ಮಧ್ಯೆ ಅಲ್ಲಲ್ಲೇ ಕೆಲವು ಲೀಡರ್ಗಳು ಎದ್ದು ಕೂತಿದ್ದಾರೆ. ಈ ಸರ್ಕಾರ ಅಲ್ಪಾವಧಿಯ ಸರ್ಕಾರ ಅನಿಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಲೇವಡಿ ಮಾಡಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಐದು ತಿಂಗಳ ಸಾಧನೆ ಅಂದ್ರೆ.. ಮಂತ್ರಿ, ಮಂತ್ರಿಗಳ ಬಗ್ಗೆ ಪರಸ್ಪರ ನಂಬಿಕೆ ಇಲ್ಲ. ಅಪನಂಬಿಕೆಯಿಂದ ಗುಂಪುಗಳಾಗಿ ಕಚ್ಚಾಡುತ್ತಿದ್ದಾರೆ ಎಂದು ಕುಟುಕಿದರು.
ಶಾಸಕರು, ಮಂತ್ರಿಗಳ ಮಧ್ಯೆ ಯಾವುದೇ ಕೆಲಸ ಆಗುವುದಿಲ್ಲ ಅಂತೇಳಿ ಮಂತ್ರಿಗಳ ಮೇಲೆ ಶಾಸಕರು ಆರೋಪ ಮಾಡುತ್ತಿದಾರೆ. ರಾಜ್ಯದಲ್ಲಿ ಬರ ಬಿದ್ದಿದೆ, ಜನ ಸಂಕಷ್ಟದಲ್ಲಿದ್ದಾರೆ. ಮಳೆಯಾಗದೇ ರೈತರು ಕಂಗಾಲು ಆಗಿದ್ದಾರೆ. ವಿದ್ಯುತ್ ಕೂಡಾ ಪೂರೈಕೆ ಆಗ್ತಿಲ್ಲ. ಈ ಸಂದರ್ಭದಲ್ಲಿ ಭ್ರಷ್ಟಾಚಾರದ ಹಣಕ್ಕಾಗಿ ಶಾಸಕರು, ಮಂತ್ರಿಗಳ ಮಧ್ಯೆ ಕಚ್ಚಾಟ ನಡೆದಿದೆ. ಇದು ಇಡೀ ರಾಜ್ಯದ 30 ಜಿಲ್ಲೆಗಳ ಪರಿಸ್ಥಿತಿ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ
ಸಿದ್ದರಾಮಯ್ಯ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ. ಬರ ಪರಿಹಾರದ ಕಾಮಗಾರಿಗಳನ್ನು ಪ್ರಾರಂಭ ಮಾಡಲಿಲ್ಲ. ಕುಡಿಯುವ ನೀರು, ಮೇವಿನ ವ್ಯವಸ್ಥೆ ಮಾಡಲಿಲ್ಲ. ಬೆಳೆ ನಾಶ ಆದ್ರೆ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿಲ್ಲ. ಹೀಗಾಗಿ, ಜನ ಇವತ್ತು ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಗೋವಿಂದ ಕಾರಜೋಳ ಹರಿಹಾಯ್ದರು.