ಚಾಮರಾಜನಗರ : ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಒಟ್ಟು 216 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ರಾಜ್ಯದ ವಸ್ತುಸ್ಥಿತಿಯನ್ನ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ, ನಮಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಕೇಂದ್ರ ಗೃಹ ಸಚಿವರು, ಕೃಷಿ ಸಚಿವರ ಭೇಟಿಗೆ ದಿನಾಂಕ ಕೊಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಸೆಪ್ಟಂಬರ್ 23ರಿಂದಲೂ ಕೇಂದ್ರ ಸಚಿವರ ಭೇಟಿಗೆ ಪ್ರಯತ್ನಿಸುತ್ತಿದ್ದೇವೆ. ನಮ್ಮ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ನಿತ್ಯ ಫೋನ್ ಮಾಡಿ ವಿಚಾರಿಸುತ್ತಿದ್ದಾರೆ. ನಾನು ಇನ್ನೊಂದು ವಾರ ಕಾಯುತ್ತೇನೆ, ಬಳಿಕ ದೆಹಲಿಗೆ ಹೋಗಿ ಸರ್ಕಾರದ ಸೆಕ್ರೆಟರಿ ಅವರನ್ನೇ ಖುದ್ದಾಗಿ ಭೇಟಿ ಮಾಡಿ ವಿಚಾರಿಸುತ್ತೇನೆ ಎಂದು ಹೇಳಿದ್ದಾರೆ.
ನಾವೇನು ಹೆಚ್ಚುವರಿ ಪರಿಹಾರ ಕೇಳ್ತಿಲ್ಲ
ನಾವೇನು ಹೆಚ್ಚುವರಿ ಪರಿಹಾರ ಕೇಳುತ್ತಿಲ್ಲ, NDRF ರೂಲ್ಸ್ ಪ್ರಕಾರ ಕೊಡಬೇಕಾಗಿರೋದನ್ನ ಕೊಡಬೇಕು. ಬರಗಾಲ ಸಂದರ್ಭದಲ್ಲಿ ಅಗತ್ಯ ನೆರವು ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಬೇರೆ ರಾಜ್ಯಗಳಿಗೆ ಮಾಡಿದಂತೆ ನಮಗೂ ಸಹಾಯ ಮಾಡಬೇಕು. ಆದರೆ, ಕೇಂದ್ರ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.