ಬೆಂಗಳೂರು : ಭಾರತ ವಿರೋಧಿ ಭಯೋತ್ಪಾದಕ ಚಟುವಟಿಕೆಯಲ್ಲಿ ಶಾಮೀಲಾಗಿದ್ದ ಮತ್ತೋರ್ವ ಕುಖ್ಯಾತ ಉಗ್ರನನ್ನು ವಿದೇಶಿ ನೆಲದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ವರದಿಯಾಗಿದೆ.
ಲಷ್ಕರ್ ಇ ಜಬ್ಬಾರ್ ಉಗ್ರ ಸಂಘಟನೆಯ ಸ್ಥಾಪಕ, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ನ ನಿಕಟವರ್ತಿ ದಾವೂದ್ ಮಲಿಕ್ ಉತ್ತರ ಪಾಕಿಸ್ತಾನದ ವಝಿರಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳ ಗುಂಡಿನ ದಾಳಿಗೆ ಬಲಿಯಾಗಿರುವುದಾಗಿ ವರದಿ ವಿವರಿಸಿದೆ. ಉತ್ತರ ಪಾಕಿಸ್ತಾನದ ವಝಿರಿಸ್ತಾನದ ಮಿರಾಲಿ ಪ್ರದೇಶದಲ್ಲಿ ದಾವೂದ್ ಮಲಿಕ್ ನನ್ನು ಮುಸುಕುಧಾರಿ ಗನ್ ಮ್ಯಾನ್ಗಳು ಗುಂಡು ಹಾರಿಸಿ ಹತ್ಯೆಗೈದಿರುವುದಾಗಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? : ಹಮಾಸ್ ವಾಯುಪಡೆ ಮುಖ್ಯಸ್ಥ ಅಬು ಮುರಾದ್ ಹತ್ಯೆ
ಖಾಸಗಿ ಕ್ಲಿನಿಕ್ ವೊಂದಕ್ಕೆ ಮಲಿಕ್ ಆಗಮಿಸಿದ್ದ ವೇಳೆ ಬೆನ್ನಟ್ಟಿ ಬಂದಿದ್ದ ಹಂತಕರು ಏಕಾಏಕಿ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಘಟನೆ ಪಾಕಿಸ್ತಾನದೊಳಗೆ ಕಾರ್ಯಾಚರಣೆಯಲ್ಲಿರುವ ಭಯೋತ್ಪಾದಕ ಸಂಘಟನೆಗಳ ನಡುವಿನ ಅಂತರಿಕ ಕಲಹ ಭಾಗವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ತೀವ್ರಗಾಮಿ ಸಿದ್ಧಾಂತಗಳನ್ನು ಬೆಂಬಲಿಸುವ ಲಷ್ಕರ್ ಎ ಜಬ್ಬಾರ್ ಭಯೋತ್ಪಾದಕ ಸಂಘಟನೆ ಹಲವಾರು ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿತ್ತು ಎಂದು ವರದಿ ತಿಳಿಸಿದೆ.