ಬೆಂಗಳೂರು : ರಾಜ್ಯದಲ್ಲಿ ಧರ್ಮದಂಗಲ್‌ಗೆ ಸಾಕ್ಷಿಯಾಗಿದ್ದ ಹಿಜಾಬ್ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅದೊಂದು ಆದೇಶ ಹಿಂದೂ ಸಂಘಟನೆಗಳನ್ನ ಕೆರಳಿಸಿದ್ದು, ಆದೇಶ ಹಿಂಪಡೆಯುವಂತೆ ಒತ್ತಾಯ ಕೇಳಿಬರುತ್ತಿದೆ.
ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ಹಿಜಾಬ್ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ ಅಕ್ಟೋಬರ್ 28 ಮತ್ತು 29 ರಂದು ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಪರೀಕ್ಷೆಯಲ್ಲಿ ಯಾವುದೇ ರೀತಿಯಲ್ಲಿ ಅಕ್ರಮಗಳಿಗೆ ಆಸ್ಪದ ಕೊಡಬಾರದೆಂದು ಪರೀಕ್ಷಾ ಪ್ರಾಧಿಕಾರ ನಿಬಂಧನೆಗಳನ್ನ ವಿಧಿಸಿದೆ. ಆದ್ರೆ ಉಳಿದೆಲ್ಲ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನ ಮಾಡಿರುವ ಪರೀಕ್ಷಾ ಪ್ರಾಧಿಕಾರ, ಹಿಜಾಬ್ಗೆ ಅನುಮತಿ ಕೊಟ್ಟಿರೋದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮತ್ತೆ ಧರ್ಮ ದಂಗಲ್ ಸಾಧ್ಯತೆ
ಪರೀಕ್ಷಾ ಪ್ರಾಧಿಕಾರ ಹಿಜಾಬ್ಗೆ ಅವಕಾಶ ಕಲ್ಪಿಸಿರೋದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಎಲ್ಲಾ ಅಭ್ಯರ್ಥಿಗಳಿಗೂ ಒಂದೇ ರೀತಿಯಾಗಿ ನಿಯಮವನ್ನ ಮಾಡಬೇಕಿದ್ಧ ಪರೀಕ್ಷಾ ಪ್ರಾಧಿಕಾರ ಸರ್ಕಾರದ ಅಣತಿಯಂತೆ ಕೇವಲ ಒಂದು ವರ್ಗದವರನ್ನ ತುಷ್ಟೀಕರಣ ಮಾಡಿದೆ ಎಂದು ಆಕ್ರೋಶ ಹೊರಹಾಕಿದೆ.
ಒಟ್ನಲ್ಲಿ, ರಾಜ್ಯದಲ್ಲಿ ದೊಡ್ಡ ಧರ್ಮದಂಗಲ್ ಸೃಷ್ಟಿಸಿದ್ದ ಹಿಜಾಬ್ ವಿವಾದ ಚುನಾವಣೆಯ ನಂತರದಲ್ಲಿ ತಣ್ಣಗಾಗಿತ್ತು. ಆದ್ರೆ, ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೊಟ್ಟಿರೋದು ಮತ್ತೆ ಧರ್ಮ ದಂಗಲ್ ನಡೆಯುವ ಸಾಧ್ಯತೆ ಇದೆ.