ಬೆಂಗಳೂರು : ಪೂರ್ಣಿಮಾ ಅವರು ಮಾಜಿ ಶಾಸಕಿ, ಇದಕ್ಕಿಂತ ಮೊದಲು ಎ. ಕೃಷ್ಣಪ್ಪನವರ ಮಗಳು. ಅವರಿಗೆ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಲು ಅಗಲಿಲ್ಲ. ಟಿಕೆಟ್ ತಪ್ಪೋದಕ್ಕೆ ನಾನು ಸ್ವಲ್ಪ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನೇ ಟಿಕೆಟ್ ತಪ್ಪಿಸಿದ್ದೀನಿ ಅಂತ ಗೊತ್ತಿದ್ರೂ ಪೂರ್ಣಿಮಾ ಕೋಪ ಮಾಡಿಕೊಂಡಿಲ್ಲ ಎಂದರು.
ನಾನು ಪಕ್ಷ ಬಿಟ್ರಲ್ಲ.. ಬೈರತಿ ಬಸವರಾಜ್ ಅವರಿಗೆ ಟಿಕೆಟ್ ಕೊಡಿಸಲು ಹೋಗಿ ಕೃಷ್ಣಪ್ಪಗೆ ಅನ್ಯಾಯ ಆಯ್ತು. ಆಗ ನೊಂದು ಕಾಂಗ್ರೆಸ್ ಬಿಟ್ಟು ಹೊದ್ರು. ಆಗ ಬಿಜೆಪಿಯಿಂದ ಮಗಳು ಪೂರ್ಣಿಮಾ ಸ್ಪರ್ಧಿಸಿ ಶಾಸಕಿ ಆದ್ರು. ಶ್ರೀನಿವಾಸ ಒಲ್ಲದ ಮನಸ್ಸಿನಿಂದಲೇ ಬಿಜೆಪಿಯಲ್ಲಿದ್ರು. ಯಾಕಂದ್ರೆ ಸಾಮಾಜಿಕ ನ್ಯಾಯದ ಪರ ಅವರು ಇದ್ರು ಎಂದು ಸಿದ್ದರಾಮಯ್ಯ ಹೇಳಿದರು.
ಎಲ್ಲರಿಗೂ ಕಾಂಗ್ರೆಸ್ ರಕ್ಷಣೆ ಕೊಡುತ್ತೆ
ಕಾಂಗ್ರೆಸ್ ಜಾತಿ, ಧರ್ಮ ಆಧಾರದ ಮೇಲೆ ಒಡೆಯುವ ಪಕ್ಷ ಅಲ್ಲ. ಸಂವಿಧಾನದ ಉದ್ದೇಶ ಈಡೇರಿಸಲು ಬದ್ದವಾಗಿರೋ ಪಕ್ಷ ಕಾಂಗ್ರೆಸ್. ಇನ್ಮುಂದೆ ಶ್ರೀನಿವಾಸ್ಗೆ ಹಾಗೂ ಪೂರ್ಣಿಮಾಗೆ ರಾಜಕೀಯವಾಗಿ ಅನ್ಯಾಯವಾಗಲ್ಲ. ಎಲ್ಲರಿಗೂ ಕಾಂಗ್ರೆಸ್ ರಕ್ಷಣೆ ಕೊಡುತ್ತದೆ. ಪೂರ್ಣಿಮಾ ಶ್ರೀನಿವಾಸ್, ಡಿ.ಟಿ ಶ್ರೀನಿವಾಸ್, ನರಸಿಂಹ ನಾಯಕ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಎಲ್ಲರಿಗೂ ನಾನು ಪಕ್ಷಕ್ಕೆ ಬರಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಜೆಡಿಎಸ್ ವಿರುದ್ದ ವ್ಯಂಗ್ಯವಾಡಿದ ಸಿದ್ದರಾಮಯ್ಯ ಅವರು, ಜಾತ್ಯಾತೀತ ತತ್ವ ಅಂತ ಹಾಕ್ಕೊಂಡು ಸ್ವಾರ್ಥಕ್ಕೆ ಕೋಮುವಾದಿಗಳ ಜೊತೆ ಸೇರಿಕೊಂಡರು. ಆದರೆ, ಕಾಂಗ್ರೆಸ್ ಕೋಮುವಾದವನ್ನು ಬೆಂಬಲಿಸಲ್ಲ ಎಂದು ಕುಟುಕಿದರು.