Monday, December 23, 2024

ದೊಡ್ಡಬಳ್ಳಾಪುರ ನಗರದಲ್ಲಿ ಮಹಿಷ ಉತ್ಸವ ಆಚರಣೆಗೆ ಸಿದ್ದತೆ!

ದೊಡ್ಡಬಳ್ಳಾಪುರ : ಅಕ್ಟೋಬರ್ 22ರಂದು ನಗರದಲ್ಲಿ ಮಹಿಷ ಉತ್ಸವ ಆಚರಣೆ ಮಾಡಲಾಗುವುದು ಎಂದು ದಲಿತ ವಿಮೋಚನಾ ಸೇನೆಯ ರಾಜ್ಯಾಧ್ಯಕ್ಷ ಮಾ.ಮುನಿರಾಜು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ತಾಲ್ಲೂಕು ಮಹಿಷ ಉತ್ಸವ ಆಚರಣ ಸಮಿತಿ ವತಿಯಿಂದ ಇದೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಕನ್ನಡ ಜಾಗೃತ ಭವನದಲ್ಲಿ ದ್ರಾವಿಡ ಸಂಸ್ಕೃತಿಯ ಮಹರಾಜ ಮಹಾದೇವ ಹರಹಂತ‌ ಮಹಿಷ ಉತ್ಸವವನ್ನ ಏರ್ಪಡಿಸಲಾಗಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಚಾರವಾದಿಗಳು, ಇತಿಹಾಸತಜ್ಞರು, ಪ್ರಗತಿಪರ ಚಿಂತಕರಾದ ಕಲಬುರುಗಿಯ ಪ್ರೊ ವಿಠಲ್ ವಗ್ಗನ್ ಅವರು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಇತಿಹಾಸದಲ್ಲಿ ಹುದುಗಿ ಹೋಗಿರುವ ಶೂದ್ರ ಹಾಗೂ ಮೂಲನಿವಾಸಿಗಳ ಸಂಸ್ಕೃತಿಯನ್ನು ಮುನ್ನೆಲೆಗೆ ತಂದು ದ್ರಾವಿಡ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.

ಆಯಾ ಜಾತಿ ಜನಾಂಗಗಳ ಸಾಂಸ್ಕೃತಿಕ ಆಚರಣೆಗೆ ಸಂವಿಧಾನದಲ್ಲಿ ಅವಕಾಶವಿದೆ. ನಾವು ಯಾರ ವಿರುದ್ಧವೂ ಈ ಆಚರಣೆಯನ್ನು ಮಾಡುತ್ತಿಲ್ಲ, ನಮ್ಮ ದ್ರಾವಿಡ ಅಸ್ಮಿತೆಯ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಲು ಮಾಡುತ್ತಿದ್ದೇವೆ ಎಂದರು.

ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಗುರುರಾಜಪ್ಪ ಮಾತನಾಡಿ ಮಹಿಷನ ಚರಿತ್ರೆಯನ್ನ ಅರಿತ ದ್ರಾವಿಡ ಸಂತತಿಯ ಪ್ರಗತಿಪರರು, ಚಿಂತಕರು, ಡಾ.ಬಿ.ಆರ್.ಅಂಬೇಡ್ಕರ್, ಬುದ್ದನ ಅನುಯಾಯಿಗಳು ಮೈಸೂರಿನಲ್ಲಿ ಕಳೆದ 40ವರ್ಷಗಳಿಂದಲೂ ಮಹಿಷ ಉತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ನಮ್ಮ ನಾಗ ಜನಾಂಗದ ಅರಸನ ಬಗ್ಗೆ ನಮ್ಮ ಮುಂದಿನ‌ ತಲೆಮಾರಿಗೆ ತಿಳಿಸಿಕೊಡುವ ಅಗತ್ಯವಿದೆ ಹಾಗಾಗಿ ದೊಡ್ಡಬಳ್ಳಾಪುರದಲ್ಲಿ ಮಹಿಷ ಉತ್ಸವ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಬೆಂ.ಗ್ರಾ, ಎಸ್.ಟಿ.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ ನಮ್ಮ ಜನಾಂಗಗಳು ಸುಶಿಕ್ಷಿತರಾಗಿದ್ದಾರೆ, ಸರಿ ತಪ್ಪುಗಳ ವಿವೇಚನೆಯ ಅರಿವಾಗಿದೆ, ಹಾಗಾಗಿ ಶೂದ್ರ ಮತ್ತು ಮೂಲ ನಿವಾಸಿಗಳ ಇತಿಹಾಸ ತಿಳಿಸಿಕೊಡುವ ಸಲುವಾಗಿ ಈ ಉತ್ಸವ ಆಚರಣೆ ಮಾಡುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಎಸ್‌ಡಿ.ಮುನಿರಾಜು, ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ, ಪ್ರಜಾ ವಿಮೋಚನಾ ಚಳುವಳಿಯ ತಳಗವಾರ ಪುನೀತ್, ಉದ್ಯಮಿ ರಾಜಗೋಪಾಲ್, ಡಾ.ಬಿ.ಆರ್.ಅಂಬೇಡ್ಕರ್ ಬಹುಜನ ಕ್ರಾಂತಿಕಾರಿ ಸಮಿತಿಯ ಮಹೇಶ್, ವಡ್ಡರಹಳ್ಳಿಯ ಅಜಯ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES