Saturday, November 2, 2024

ಅರಶಿನ-ಕುಂಕುಮ ನಿಷೇಧ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ ಎಂದಿದ್ದಾರೆ.

ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ. ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಹಿಂದೂ ವಿರೋಧಿ ನಡೆ

ಪಾರಂಪರಿಕ ಕಟ್ಟಡಗಳಲ್ಲಿ ಆಯುಧ ಪೂಜೆ ಸಂದರ್ಭದಲ್ಲಿ ಅರಿಶಿಣ-ಕುಂಕುಮ ಬಳಸಬಾರದು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ರಾಸಾಯನಿಕ ಪದಾರ್ಥ ಇರುವ ಅರಿಶಿಣ-ಕುಂಕುಮ ಬಳಸಬಾರದು ಎಂದು ಸುತ್ತೋಲೆ ಹೊರಡಿಸಿದೆ. ರಾಜ್ಯ ಸರ್ಕಾರ ಬಹಳ ಜಾಣತನದಿಂದ ಸುತ್ತೋಲೆ ಹೊರಡಿಸಿದೆ. ರಾಜ್ಯ ಸರ್ಕಾರ ಹಿಂದೂಗಳ ವಿರುದ್ಧ ಏನೇನು ಮಾಡಬೇಕೋ ಅವೆಲ್ಲವೂ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES