ಬೆಂಗಳೂರು : ದೇವೇಗೌಡರರು ಯಾರನ್ನೂ ಬೆಳೆಯಲು ಬಿಡಲಿಲ್ಲ. ಎಲ್ಲ ನನಗೆ, ನನ್ನ ಮಕ್ಕಳಿಗೆ ಅಂತ ಇರೋರು ದೇವೇಗೌಡ್ರು. ಒಕ್ಕಲಿಗರನ್ನ, ಯಾರನ್ನೂ ಬೆಳೆಸಲಿಲ್ಲ ಎಂದು ಜೆಡಿಎಸ್ ಉಚ್ಚಾಟಿತ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಕುಟುಕಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಿಗೆ ನನ್ನನ್ನು ತೆಗೆಯುವ ಅಧಿಕಾರ ಇಲ್ಲ. ನನಗೆ ಮೊದಲು ನೊಟೀಸ್ ಕೊಡಬೇಕು. ಕಾರ್ಯಕಾರಿ ಸಮಿತಿಯ 2 ಅಥವಾ 3ನೇ ಸದಸ್ಯರ ಅನುಮತಿ ಪಡೆದು ನೊಟೀಸ್ ಕೊಡಬೇಕು ಎಂದರು.
ಇವತ್ತು ಗುರುವಾರ, ನಾನು ಉಪವಾಸ ಇದೀನಿ. ಇದೇ ಗುರುವಾರ ಹುಬ್ಬಳ್ಳಿ ಈದ್ಗಾ ಮೈದಾನ ಗಲಾಟೆ ವೇಳೆ ನನ್ನ ಮಗ ಸತ್ತ. ನನ್ನ ಮಗ ಸತ್ತರೂ ನಿಮ್ಮ ಪರ ನಿಂತಿದ್ದೆ ನಾನು. ನನ್ನನ್ನು ತೆಗೆದಿರಿ ಸರಿ, ನನ್ನ ಬದಲು ಜಿ.ಟಿ ದೇವೇಗೌಡರನ್ನು ಅಧ್ಯಕ್ಷ ಮಾಡಬಹುದಿತ್ತಲ್ವಾ? ದೇವೇಗೌಡರ ಆದೇಶವನ್ನು ಹೈಕೋರ್ಟ್ ನಲ್ಲೂ ಪ್ರಶ್ನೆ ಮಾಡ್ತೇನೆ, ತಡೆಯಾಜ್ಞೆ ತಗೋತೇನೆ. ಜಿ.ಟಿ ದೇವೇಗೌಡರನ್ನು ಅಧ್ಯಕ್ಷ ಮಾಡಬಹುದಿತ್ತು, ಕುಮಾರಸ್ವಾಮಿ ಅವರನ್ನು ಯಾಕೆ ಮಾಡಿದ್ರಿ? ನಿಮಗೆ ಪುತ್ರ ವ್ಯಾಮೋಹ ಇದೆ ಅಂತ ಇದರಲ್ಲೇ ಗೊತ್ತಾಗುತ್ತೆ ಎಂದು ವಾಗ್ದಾಳಿ ನಡೆಸಿದರು.
ಜನತಾದಳ ವಿಸರ್ಜನೆ ಮಾಡಕ್ಕಾಗಲ್ಲ
ನನ್ನ ಪದಚ್ಯುತಿ ಅಲ್ಪಸಂಖ್ಯಾತ ವಿರೋಧಿ ನಡೆ ಅಲ್ಲ. ಯಾಕಂದ್ರೆ ನಾನು ಕನ್ನಡಿಗ, ಒಂದು ಜಾತಿಗೆ ಸೀಮಿತ ಆಗಿಲ್ಲ ನಾನು. ಜನತಾದಳ ವಿಸರ್ಜನೆ ಮಾಡಕ್ಕಾಗಲ್ಲ, ನಮ್ಮದೇ ನಿಜವಾದ ಜನತಾ ದಳ. ಕಾನೂನು ಹೋರಾಟದ ಜತೆಗೆ, ಚುನಾವಣಾ ಆಯೋಗದಲ್ಲೂ ಹೋರಾಟ ಮಾಡ್ತೇನೆ. ಕನ್ನಡದ ಜನ ನನ್ನ ಪರ ಇದ್ದಾರೆ, ಜನ ಇವರಿಗೆ ಉತ್ತರ ಕೊಡ್ತಾರೆ ಎಂದು ಹೇಳಿದರು.
ಇನ್ನೂ ಡೈವೋರ್ಸ್ ಆಗಿಲ್ಲ
ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಇನ್ನೂ ಡೈವೋರ್ಸ್ ಆಗಿಲ್ಲ, ಈಗಲೇ ಏನ್ ಹೇಳಕ್ಕಾಗುತ್ತೆ? ಕಾಂಗ್ರೆಸ್ ಪಕ್ಷಕ್ಕೆ ಹೋಗ್ತೇವೋ, ಜೆಡಿಎಸ್ಗೇ ಬರ್ತಾರೋ ನೋಡೋಣ. ನಿತೀಶ್ ಕುಮಾರ್, ಕೇಜ್ರಿವಾಲ್ ಜತೆಗೆ ಮಾತನಾಡಿದ್ದೇನೆ. ರಾಜ್ಯ ನಾಯಕರ ಜೊತೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸಿ.ಎಂ ಇಬ್ರಾಹಿಂ ತಿಳಿಸಿದರು.