ಚಿಕ್ಕಮಗಳೂರು : ಡಿಕೆಶಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಹಿನ್ನೆಲೆ ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ಡಿಕೆಶಿ ಹೆಸರೇಳದೆ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿಂದು ಹಾಲಿಗೆ, ನೀರಿಂದು ನೀರಿಗೆ, ಉಪ್ಪು ತಿಂದೋನು ನೀರು ಕುಡಿಯಲೇಬೇಕು. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು, ಪ್ರಾಮಾಣಿಕರಿಗೆ ತೊಂದರೆ ಆಗಬಾರದು. ಯಾರಾದರೂ ಅಕ್ರಮ ಮಾಡಿದ್ರೆ ಅದು ಇಂದಲ್ಲ, ನಾಳೆ ಬಯಲಿಗೆ ಬರಬೇಕು. ಕಾನೂನಿಗಿಂತ ಆತೀತರಾದವರು ಯಾರಾದರೂ ಇದ್ದೀವಾ? ಎಂದು ಹೇಳಿದ್ದಾರೆ.
ನಾನು, ಸಿಎಂ, ಡಿಸಿಎಂ, ಪ್ರಧಾನಿ ಯಾರೂ ಕಾನೂನಿಗೆ ಅತಿಥರಲ್ಲ. ಇವರಿಗೆ ಕಾನೂನು ಅನ್ವಯ ಆಗಲ್ಲ, ಏನ್ ಮಡಿದ್ರೂ ನಡೆಯುತ್ತೆ ಅನ್ನೋದು ನಮ್ಮ ದೇಶದಲ್ಲಿ ಇಲ್ಲ. ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು. ಯಾರು ತಪ್ಪು ಮಾಡಿದ್ದಾರೆಂದು ಹೇಳುವ ಅಧಿಕಾರ ನನಗೆ ಇಲ್ಲ, ನ್ಯಾಯಾಲಯಕ್ಕೆ ಇದೆ. ನಾವು ಮಾಡಿರಬಹುದು ಅಂತ ಹೇಳಬಹುದು, ಮಾಡಿದ್ದಾರೆ ಅಂತ ಹೇಳಕ್ಕೆ ಆಗಲ್ಲ ಎಂದು ತಿಳಿಸಿದ್ದಾರೆ.