ಬೆಂಗಳೂರು : ಆಪರೇಷನ್ ಕಮಲ ಮಾಡಬೇಕಾದರೆ 65 MLA ಬೇಕು. ಅಷ್ಟು ಸಿಕ್ತಾರಾ ಇವರಿಗೆ? 5 MLA ಇವರಿಗೆ ಸಿಗಲ್ಲ ಎಂದು ಬಿಜೆಪಿ ನಾಯಕರಿಗೆ ಸಚಿವ ಎಂ.ಬಿ ಪಾಟೀಲ್ ಟಕ್ಕರ್ ಕೊಟ್ಟರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆಪರೇಷನ್ ನಂತರ ಇವರ ಕಥೆ ಏನಾಗಿದೆ ಗೊತ್ತಿದೆಯಲ್ಲ. ಬಿಜೆಪಿ ಮುಳುಗುತ್ತಿರೋ ಹಡಗಲ್ಲ, ಬಿಜೆಪಿ ಈಗಾಗಲೇ ಮುಳುಗಿರೋ ಹಡಗು. ರೇಣುಕಾಚಾರ್ಯ ನಿನ್ನೆ ಹೇಳಿಕೆ ಕೊಟ್ಟಿಲ್ವಾ? ಬಿಜೆಪಿಯಲ್ಲಿ ಯಾವುದೇ ನಾಯಕ ಇಲ್ಲ ಅಂತ. ಬಿಜೆಪಿಯಲ್ಲಿ ಏನು ಉಳಿದಿಲ್ಲ. ಸಂಪೂರ್ಣ ನಿರ್ನಾಮ ಆಗ್ತಾರೆ ಎಂದು ಕುಟುಕಿದರು.
ಐಟಿ ದಾಳಿ ತನಿಖೆ ಮಾಡಿಸಿ ಎಂಬ ಬಿಜೆಪಿ ಆಗ್ರಹ ವಿಚಾರವಾಗಿ ಮಾತನಾಡಿ, ಐಟಿ ದಾಳಿಯಾಗಿದೆ, ಐಟಿ ಅವರೇ ತನಿಖೆ ಮಾಡ್ತಾರೆ. ಇದು 40% ಕಮೀಷನ್ ಹಣ. ಹಾಗಾಗಿ ಬಿಜೆಪಿಯವರ ಹಣನೇ ಅದು. ನಮ್ಮ ಕಾಲದಲ್ಲಿ ಆಗಿರೋದು ಅಲ್ಲ. ನಮ್ಮ ಕಾಲದಲ್ಲಿ ಇನ್ನೂ ಟೆಂಡರೇ ಆಗಿಲ್ಲ ಎಂದು ಹೇಳಿದರು.
ರಮೇಶ್ಗೆ ಕಾಂಗ್ರೆಸ್ಗೆ ಬರೋಕೆ ಒಲವು
ಜಗದೀಶ್ ಶೆಟ್ಟರ್ ಹಾಗೂ ರಮೇಶ್ ಜಾರಕಿಹೊಳಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಅಧ್ಯಕ್ಷರು, ಸಿಎಂ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಂತದಲ್ಲಿ ನಿರ್ಧಾರ ಆಗೋದು. ಯಾಕೆ ಭೇಟಿಯಾಗಿದ್ದಾರೆ ಅಂತ ಗೊತ್ತಿಲ್ಲ. ಅದು ವಯಕ್ತಿಕ ಭೇಟಿನಾ? ರಾಜಕೀಯ ಭೇಟಿನಾ ಅಂತ ನಮಗೆ ಗೊತ್ತಿಲ್ಲ. ರಮೇಶ್ ಅವರಿಗೆ ಒಲವು ಇರಬಹುದು ಕಾಂಗ್ರೆಸ್ ಪಕ್ಷಕ್ಕೆ ಬರೋಕೆ ಎಂದು ಎಂ.ಬಿ. ಪಾಟೀಲ್ ತಿಳಿಸಿದರು.