ಚಿತ್ರದುರ್ಗ : ಅಬಕಾರಿ ಇಲಾಖೆಯಲ್ಲಿ ಬಹಳ ದಿನದಿಂದ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರ ಸುಧಾರಣೆ ಮಾಡಲು ಹೆಜ್ಜೆ ಹಾಕುತ್ತಿದ್ದೇವೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸ್ಟಲರಿ ನವೀಕರಣ ಎರಡು ವರ್ಷ ಮಾಡಲು ಹೇಳಿದ್ದೇವೆ. ಬಾರ್ ರಿನಿವಲ್ ವಿಚಾರ ಕೂಡ ಎರಡು ವರ್ಷಕ್ಕೆ ತೀರ್ಮಾನ ಮಾಡಿದ್ದೇವೆ. ಎಲ್ಲೆಲ್ಲಿ ಸಾಧ್ಯ ಇದೆಯೋ ಅಲ್ಲಿ ಕಂಟ್ರೋಲ್ ಮಾಡುತ್ತೇವೆ ಎಂದರು.
ಭ್ರಷ್ಟಾಚಾರ ಬಹಳ ವರ್ಷಗಳ ಬಳುವಳಿ. ಭ್ರಷ್ಟಾಚಾರ ಯಾವ ರೀತಿ ಕಟ್ ಮಾಡಬೇಕು ಮಾಡುತ್ತೇವೆ. ಬಿಜೆಪಿ ನಾಯಕರಿಗೆ ಮಾಡಲು ಬೇರೆ ಕೆಲಸ ಇಲ್ಲ. ಗುತ್ತಿಗೆದಾರರ ಮನೆಯಲ್ಲಿ ಹಣ ಸಿಕ್ಕದ್ದು ಕಾಂಗ್ರೆಸ್ ನವರದ್ದು ಎನ್ನುತ್ತಾರೆ. ಯಾಕೆ ಬಿಜೆಪಿಗೆ ಸೇರಿದ ಹಣ ಯಾಕೆ ಇರಬಾರದು? ಬಿಜೆಪಿಯವರು ಸತ್ಯ ಹರಿಶ್ಚಂದ್ರರಾ? ಹಣ ಕೊಡದೆ ಚುನಾವಣೆ ಮಾಡಿದ್ದಾರಾ? ಬಿಜೆಪಿಗೆ ಸೇರಿದ ಹಣ ಎಂದು ನನಗೂ ಮಾಹಿತಿಯಿದೆ ಎಂದು ಚಾಟಿ ಬೀಸಿದರು.
ಹೊಸ ಮದ್ಯದಂಗಡಿ ತೆರೆಯಲ್ಲ
ಮಾಜಿ ಸಚಿವ ಸಿ.ಟಿ. ರವಿ ಹೇಳಿಕೆಗೆ ಟಾಂಗ್ ನೀಡಿದ ಅವರು, ಸಿ.ಟಿ. ರವಿ ಆಧಾರ ಇಲ್ಲದ ಅಪಾದನೆ ಮಾಡಿದ್ದಾರೆ. 1,000 ಮದ್ಯದಂಗಡಿ ವಿಚಾರ ಚರ್ಚೆ ಇತ್ತು. ಗ್ರಾಮ ಪಂಚಾಯತಿಗೆ ಒಂದು ಬಾರ್ ತೆರೆಯಲು ಅಧಿಕಾರಿಗಳ ಸಭೆಯಲ್ಲಿ ಚರ್ಚೆ ಮಾಡಿದ್ವಿ ಅಷ್ಟೇ. 50ರಿಂದ 60 ಬಾರ್ ಲೈಸೆನ್ಸ್ ಬೇನಾಮಿ ಹೆಸರಲ್ಲಿ ಇದೆ. ನಾನು ಈ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ. ಈ ವಿಚಾರ ಚರ್ಚೆ ಮಾಡಿದ್ದೇವೆ ಹೊರತು ಮುಂದೆ ಏನಿಲ್ಲ. ವಿಪಕ್ಷದವರು ಮೊದಲು ವಿರೋಧ ಪಕ್ಷದ ನಾಯಕರ ನೇಮಕ ಮಾಡಲಿ. ನಾವು ಹೊಸ ಮದ್ಯದಂಗಡಿ ತೆರೆಯಲ್ಲ ಎಂದು ಸ್ಪಷ್ಟನೆ ನೀಡಿದರು.