ಮೈಸೂರು : ಕಲಾವಿದ ಪಂಡಿತ್ ರಾಜೀವ್ ತಾರಾನಾಥ್ ಬಳಿ ಕಮಿಷನ್ಗಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಸಂಬಂಧ ಸ್ವತಃ ಪಂಡಿತ್ ರಾಜೀವ್ ತಾರಾನಾಥ್ ಪ್ರತಿಕ್ರಿಯಿಸಿದ್ದಾರೆ. ನನ್ನ ಬಳಿ ಯಾರೂ ಬಂದಿಲ್ಲ, ಲಂಚ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ನಮ್ಮ ಯೋಚನೆಯೇ ಬೇರೆ. ಇದೆಲ್ಲಾ ನಮಗೆ ಬೇಕಾಗಿರಲಿಲ್ಲ. ದಸರಾ ಕಾರ್ಯಕ್ರಮದ ವಿಚಾರದಲ್ಲಿ ಯಾವ ಅಧಿಕಾರಿಗಳೂ ನನ್ನನ್ನು ಸಂಪರ್ಕಿಸಿಲ್ಲ. ಈ ಬಗ್ಗೆ ನಮಗೆ ಸಂದೇಶ ತಿಳಿಯಿತು. ಅದನ್ನು ಅಧಿಕಾರಿಗಳಿಗೂ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಅಮೆರಿಕದ ಪೌರತ್ವ ಹೊಂದಿರುವೆ. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ನ ಪ್ರೊಫೆಸರ್ ಆಗಿದ್ದೆ. ಅಲ್ಲಿ ಬಹಳ ದೊಡ್ಡ ದೊಡ್ಡ ವಿದ್ವಾಂಸರು ಅಲ್ಲಿ ಪ್ರಾಧ್ಯಾಪಕರಾಗಿದ್ದರು. ಭಾರತದಿಂದ ನಾನು ಮೂರನೇ ಪ್ರಾಧ್ಯಾಪಕ. ಅಲ್ಲಿಂದ ನಾನು ಕರ್ನಾಟಕಕ್ಕೆ ಬಂದದ್ದು ಏಕೆ? ಇದು ನಿಮಗೆಲ್ಲರಿಗೂ ಅರ್ಥವಾಗಬೇಕು. ನಾನು ಅಲ್ಲಿಂದ ಇಲ್ಲಿಂದ ಬಂದಿದ್ದಕ್ಕೆ ನಿರಾಶೆಯಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.
3 ಲಕ್ಷ ಕಮಿಷನ್‌ಗೆ ಬೇಡಿಕೆ
ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಅಂತರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ದಸರಾ ಅಧಿಕಾರಿಗಳು ಅವರಿಗೆ ಕಾರ್ಯಕ್ರಮ ನೀಡಲು ನೀಡುವ ಸಂಭಾವನೆಯಲ್ಲಿ 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ನಾಚಿಕೆಗೇಡಿನ ಆರೋಪ ಕೇಳಿ ಬಂದಿದೆ.