ಬೆಂಗಳೂರು: ವಿಶ್ವಕಪ್ ಮಹಾಸಮರದಲ್ಲಿ ಭಾರತ-ಪಾಕ್ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಹೈವೋಲ್ಟೇಜ್ ಪಂದ್ಯಕ್ಕೆ ಚಾತಕಪಕ್ಷಿಯಂತೆ ಕಾದು ಕೂತಿರುವ ಕ್ರಿಕೆಟ್ ಪ್ರೇಮಿಗಳಿಗೆ ಇಂದು ಹಬ್ಬ.
ಏಕದಿನ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಇದುವರೆಗೂ 7 ಬಾರಿ ಮುಖಾಮುಖಿಯಾಗಿದ್ದು ಈ ಪೈಕಿ ಪಾಕಿಸ್ತಾನ ಭಾರತದೆದುರು ಒಂದೇ ಒಂದು ಪಂದ್ಯ ಗೆದ್ದಿಲ್ಲ. ವಿಶ್ವಕಪ್ ಶುರುವಾದಾಗಿನಿಂದ ಇಂದಿನವರೆಗೂ ಪಾಕಿಸ್ತಾನ ವಿರುದ್ಧ ಭಾರತ ಗೆದ್ದು ಬೀಗುತ್ತಲೇ ಇದೆ. ಒಮ್ಮೆಯೂ ಸೋಲದ ಭಾರತ ಈ ಬಾರಿಯೂ ಇದೇ ಪಯಣವನ್ನ ಮುಂದುವರೆಸುತ್ತಾ ಕಾದು ನೋಡಬೇಕಾಗಿದೆ.
ಭಾರತ ತಂಡ ಬ್ಯಾಟಿಂಗ್, ಬೌಲಿಂಗ್ ಎಲ್ಲಾ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ. ಹಾಗಾಗಿ ಭಾರತ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕೆ ಇಳಿಯಲಿದೆ. ಟೀಮ್ ಇಂಡಿಯಾದಲ್ಲಿ ಎಲ್ಲಾ ಕವರ್ ಆಗಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹಾಗೂ ಫಿಟ್‌ನೆಸ್ ಎಲ್ಲವೂ ಚೆನ್ನಾಗಿದೆ.
ಇನ್ನೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ. ಶುಭಮನ್ ಗಿಲ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಇಶಾನ್ ಕಿಶನ್ ಹೊರಗುಳಿಯುವ ಸಾಧ್ಯತೆ ಇದೆ. ಅಹಮದಾಬಾದ್ ಪಿಚ್ ವೇಗಿಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಮೊಹಮ್ಮದ್ ಶಮಿ ಕೂಡ ಆಡುವ ಸಾಧ್ಯತೆ ಇದೆ. ಇನ್ನೂ ಇನ್ ಫಾರಂ ಬ್ಯಾಟರ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಗೆ ಪಂದ್ಯದ ಗತಿಯನ್ನು ಬದಲಿಸುವ ತಾಕತ್ತಿದೆ.
ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಜಡೇಜಾ ಸಹ ಪಾಕಿಸ್ತಾನ ತಂಡವನ್ನ ಕಾಡಲಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಶಕ್ತಿ ತುಂಬಲಿದ್ದಾರೆ.
ನರೇಂದ್ರ ಮೋದಿ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಒಬ್ಬರೇ ಕಣಕ್ಕಿಳಿಯಲಿದ್ದಾರೆ. ಇನ್ನು ಪಾಕ್ ಆಟಗಾರರಿಗೆ ಸಿರಾಜ್ ಮತ್ತು ಬುಮ್ರಾ ಮಾರಕವಾಗಿ ಪರಿಣಮಿಸಲು ತೊಡೆ ತಟ್ಟಿ ನಿಂತಿದ್ದು, ಇಂದಿನ ಪಂದ್ಯಕ್ಕೆ ಶಮಿ ಕೂಡ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಪಾಕಿಸ್ತಾನಕ್ಕೆ ಬೌಲರ್ಗಳದ್ದೇ ಚಿಂತೆ:
ಪಾಕಿಸ್ತಾನ ತಂಡ ಕೂಡ ಟೀಂ ಇಂಡಿಯಾ ವಿರುದ್ದ ಗೆಲ್ಲಲೇಬೇಕೆಂದು ಸರ್ವ ಸನ್ನದ್ಧವಾಗಿದೆ. ಏಕದಿನ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನದಲ್ಲಿರುವ ನಾಯಕ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಮುಂಚೂಣಿ ಬ್ಯಾಟ್ಸ್ಮನ್ಗಳಾಗಿದ್ದಾರೆ. ಪಾಕಿಸ್ತಾನ ತಂಡಕ್ಕೆ ತನ್ನ ಬೌಲಿಂಗ್ ವಿಭಾಗವೇ ಶಕ್ತಿ. ಆದ್ರೆ ಪಾಕ್ ಬೌಲಿಂಗ್ ವಿಭಾಗ ಯಾಕೋ ವಿಶ್ವಕಪ್ನ ವಾರ್ಮ್ ಅಪ್ ಪಂದ್ಯಗಳಿಂದಲೂ ನೀರಸ ಪ್ರದರ್ಶನ ತೋರಿದೆ. ಆದರೂ ಸಹ ಭಾರತದ ವಿರುದ್ಧ ಶಾಹಿನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಪುಟಿದೇಳುವ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಭಾರತ-ಪಾಕ್ ಪಂದ್ಯವೆಂದರೆ ಉಭಯ ತಂಡಗಳಿಗೂ ಸ್ವಲ್ಪ ಜವಾಬ್ದಾರಿ ಹೆಚ್ಚೇ ಇರುತ್ತದೆ. ಅಭಿಮಾನಿಗಳಂತೂ ಇದೊಂದು ರಸದೌತಣ. ಏಕದಿನ ವಿಶ್ವಕಪ್ನಲ್ಲಿ ಒಮ್ಮೆಯೂ ಸೋಲದೇ ಮುನ್ನುಗುತ್ತಿರುವ ಭಾರತ ತಂಡಕ್ಕೆ ಕನ್ನಡಿಗ ಹೆಡ್ಕೋಚ್ ರಾಹುಲ್ ದ್ರಾವಿಡ್ ಯಾವ ಸ್ಟ್ರ್ಯಾಟರ್ಜಿ ಬಳಸುತ್ತಾರೆ ಕಾದು ನೋಡಬೇಕು. ಆದರೆ, ಏನೇ ಆಗಲಿ… ಭಾರತ ಗೆದ್ದು ಬೀಗಿಲಿ… ಜೈಹೋ ಭಾರತ.