ಮೈಸೂರು : ದಸರಾದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಒದಗಿಸಿ, ಹಣ ಬಿಡುಗಡೆ ಮಾಡಿಸಲು ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಬಳಿ ಕಮಿಷನ್‌ಗೆ ಬೇಡಿಕೆ ಇಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿ ಜೊತೆ ಚರ್ಚಿಸಿದ್ದೇನೆ. ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸವನ್ನು ಮಾಡಿರುವ ಯಾರೇ ಆಗಿದ್ದರೂ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಸಾಂಸ್ಕೃತಿಕ ಮಹತ್ವವನ್ನು ಹಾಳು ಮಾಡುವ ಇಂತಹ ಸಂಗತಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ನಾವು ಸಾಂಸ್ಕೃತಿಕ ಉಪ ಸಮಿತಿಯವರು ಎಂದು ತಾರಾನಾಥರನ್ನು ಸಂಪರ್ಕಿಸಿದ್ದ ಇಬ್ಬರು, ಕಾರ್ಯಕ್ರಮಕ್ಕೆ 8 ಲಕ್ಷ ಕೇಳಿ ಸಾರ್, ಐದು ನೀವು ಇಟ್ಕೊಳ್ಳಿ, 3 ನಮಗೆ ಕೊಡಿ ಎಂದು ಆಫರ್ ಮಾಡಿದ್ದರು. ಇದಕ್ಕೆ ಒಪ್ಪದ ತಾರಾನಾಥರು ತಮ್ಮನ್ನು ಸಂಪರ್ಕಿಸಿದ್ದವರನ್ನು ಬೈದು ಕಳುಹಿಸಿದ್ದರು ಎಂದು ಮೂಲಗಳು ತಿಳಿಸಿವೆ.