ಬೆಂಗಳೂರು : ಸಾಂಸ್ಕೃತಿಕ ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಲಾವಿದರ ಬಳಿ ರಾಜ್ಯ ಸರ್ಕಾರ ಕಮಿಷನ್ ಕೇಳುತ್ತಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ತೇಜಸ್ವಿ ಸೂರ್ಯ ಮಾಹಿತಿ ಹಂಚಿಕೊಂಡಿದ್ದಾರೆ. ನಾಡಹಬ್ಬ ರಾಜ್ಯದ ಸಾಂಸ್ಕೃತಿಕ ಹೆಮ್ಮೆಯ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೂಡ ಕಾಂಗ್ರೆಸ್ ಕಮಿಷನ್ ಪಡೆಯುತ್ತಿದೆ. ಇಂಡಿಯನ್ ನ್ಯಾಷನಲ್ ಕಮಿಷನ್ (INC) ಹಸಿವು ಯಾವ ಮಟ್ಟಿಗಿದೆ ಎಂದರೆ ಪದ್ಮಶ್ರೀ ಪುರಸ್ಕೃತರ ಕಾರ್ಯಕ್ರಮದಲ್ಲಿಯೂ ತನ್ನ ‘ಕೈ’ ಚಳಕದ ಬುದ್ಧಿ ತೋರಿಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಪ್ರತಿನಿತ್ಯ ಇಂತಹ ಹಗಲು ದರೋಡೆಯ ಸುದ್ದಿಗಳಿಗೇ ರಾಜ್ಯದ ಜನತೆ ಸಾಕ್ಷಿಯಾಗಿದ್ದಾರೆ. ಇದು ಇಂದಿನ ಪ್ರಮುಖ ಸುದ್ದಿಯಷ್ಟೇ ಆದರೂ, ನಾಡಿನ ಸಾಂಸ್ಕೃತಿಕ ಹಿರಿಮೆಗೆ ಕೊಡುಗೆ ನೀಡಿರುವ ಕಲಾವಿದರಿಂದಲೂ ಕಮಿಷನ್ ಕೇಳುತ್ತಿರುವುದು ಸಮಾಜವಾದಿ ಖ್ಯಾತಿಯ ಸಿದ್ದರಾಮಯ್ಯ ಅವರ ಆಡಳಿತದ ಮಾದರಿಯ ಪ್ರತೀಕ ಎಂದು ಕುಟುಕಿದ್ದಾರೆ.
ಅತ್ಯಂತ ನಾಚಿಕೆಗೇಡಿನ ಸಂಗತಿ
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಮೂಲೆ ಮೂಲೆಗಳಿಂದ ಎಲೆಮರೆ ಕಾಯಿಯಂತಿದ್ದ ಅನೇಕ ಪ್ರತಿಭಾನ್ವಿತ ಸಾಧಕರು, ಕ್ರೀಡಾಪಟುಗಳು, ಕಲಾವಿದರನ್ನು ಗೌರವಿಸಿ, ಪದ್ಮ ಪ್ರಶಸ್ತಿ ನೀಡಿ ಗೌರವಿಸಿರುವುದು ಒಂದೆಡೆ. ಆದರೆ ಹೆಮ್ಮೆಯ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೂಡ ಕಮಿಷನ್ ಪಡೆಯುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.