Monday, December 23, 2024

ಬಿಜೆಪಿ ಸರ್ಕಾರದಲ್ಲಿ ಉತ್ತಮ ಮಳೆ ಆಗಿದ್ದರೂ ವಿದ್ಯುತ್ ಉತ್ಪಾದಿಸಲಿಲ್ಲ : ಸಿದ್ದರಾಮಯ್ಯ

ಬೆಂಗಳೂರು : ಹಿಂದಿನ ಸರ್ಕಾರದಲ್ಲಿ ಉತ್ತಮವಾದ ಅಗತ್ಯ ಮಳೆ ಆಗಿದ್ದರೂ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮಳೆ ಕೊರತೆ ಆಗಿ, ಬರಗಾಲ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕೆಲವು ಸೂಚನೆಗಳನ್ನು ನೀಡಿದರು. ಪ್ರಸ್ತುತ ಸಮಸ್ಯೆಯನ್ನು ರೈತರಿಗೆ ಮನವರಿಕೆ ಮಾಡಿಸಬೇಕು. ರೈತರಿಗೆ ಯಾವ ವೇಳೆ ಎಷ್ಟು ವಿದ್ಯುತ್ ಅಗತ್ಯವಿದೆ ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಂಡು ಇರುವ ವಿದ್ಯುತ್‌ ಅನ್ನೇ ಅವರಿಗೆ ಅಗತ್ಯ ವೇಳೆಯಲ್ಲಿ ಸರಬರಾಜು ಮಾಡಬೇಕು ಎಂದು ತಿಳಿಸಿದರು.

ವಿದ್ಯುತ್ ಕಳ್ಳತನ ಮತ್ತು ವಿದ್ಯುತ್ ಸೋರಿಕೆ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ? ವಿಚಕ್ಷಣಾ ದಳದಲ್ಲಿ ಎಷ್ಟು SP ಗಳು ಇದ್ದಾರೆ? ಅವರು ಎಷ್ಟು ವಿದ್ಯುತ್ ಕಳ್ಳತನ ಪತ್ತೆ ಹಚ್ಚಿದ್ದಾರೆ? ಎನ್ನುವುದನ್ನು ನಿಗಾ ವಹಿಸಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಮೊದಲೇ ಏಕೆ ಸಿದ್ಧತೆ ಮಾಡಿಕೊಂಡಿಲ್ಲ?

ರೈತರಿಗೆ ವಿದ್ಯುತ್ ಕೊರತೆ ಆಗದಂತೆ ಆಕಸ್ಮಿಕ‌ ಸಂದರ್ಭಕ್ಕೆ ಅಗತ್ಯವಾದ ಯೋಜನೆ, ಸಿದ್ಧತೆ ಏಕೆ ಮಾಡಿಕೊಂಡಿಲ್ಲ? ಇರುವ ವಿದ್ಯುತ್ ಅನ್ನು ವೈಜ್ಞಾನಿಕವಾಗಿ ಬೇರೆ ಬೇರೆ ಬ್ಯಾಚ್ ಗಳಲ್ಲಿ ಸರಬರಾಜು ಮಾಡಲು ಕ್ರಮ ವಹಿಸಬೇಕು. ಮೊದಲೇ ಹೀಗೆ ಮಾಡಿದ್ದರೆ ವಿದ್ಯುತ್ ಕೊರತೆಯ ನಡುವೆಯೂ ರೈತರಿಗೆ ಸಮಸ್ಯೆ ಆಗದಂತೆ ನಿರ್ವಹಿಸಬಹುದಿತ್ತು ಎಂದರು.

ಕಚೇರಿಯಲ್ಲೇ ಕುಳಿತರೆ ಆಗದು

ಅಧಿಕಾರಿಗಳು ಕಚೇರಿಯಲ್ಲೇ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಚೀಫ್ ಎಂಜಿನಿಯರ್ ಗಳು ಫೀಲ್ಡ್ ಗೆ ಹೋಗಬೇಕು. ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.

RELATED ARTICLES

Related Articles

TRENDING ARTICLES