ಯಾದಗಿರಿ : ರಾಜ್ಯದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಅವರು, ಉಚಿತ ಗ್ಯಾರಂಟಿ ಭಾಗ್ಯದ ಪರಿಣಾಮ ರಾಜ್ಯದ ಎಲ್ಲ ಹೆಸ್ಕಾಂ ಲೋಡ್ ಶೆಡ್ಡಿಂಗ್ ಮಾಡ್ತಿವೆ. 200 ಯುನಿಟ್ ಫ್ರೀ ವಿದ್ಯುತ್ ಕೊಟ್ಟ ಹೆಸ್ಕಾಂಗೆ ವಿದ್ಯುತ್ ಖರೀದಿ ಮಾಡಲು ದುಡ್ಡಿಲ್ಲ ಎಂದು ಕುಟುಕಿದ್ದಾರೆ.
ನಮ್ಮ ರಾಜ್ಯದಲ್ಲಿ ವಿದ್ಯುತ್ ಉತ್ಪದನೆ ಆಗುವ ಘಟಕ ಬಳ್ಳಾರಿ, ರಾಯಚೂರಿನ ಥರ್ಮಲ್ ಪವರ್ ಇರಬಹುದು. ಈ ಎಲ್ಲ ಕೇಂದ್ರಗಳಿಂದ ಹೆಸ್ಕಾಂಗಳು ವಿದ್ಯುತ್ ಖರೀದಿ ಮಾಡಬೇಕು. ವಿದ್ಯುತ್ ಖರೀದಿ ಮಾಡಲು ಸರ್ಕಾರದ ಬಳಿ ದುಡ್ಡಿಲ್ಲ, ಹೀಗಾಗಿ ಲೋಡ್ ಶೆಡ್ಡಿಂಗ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕವನ್ನು ಬರ್ಬಾದ್ ಮಾಡ್ತಿದೆ
ಕಳೆದ ತಿಂಗಳು ನಮ್ಮ ರಾಜ್ಯದ ಜಡ್ಜ್ ಗಳಿಗೆ ಎಂಟು ದಿನ ತಡಮಾಡಿ ಸಂಬಳ ಕೊಟ್ರು. ನಮ್ಮ ಟೀಚರ್ಸ್, ಸರ್ಕಾರಿ ನೌಕರರಿಗೆ 17 ದಿನ ತಡಮಾಡಿ ಸಂಬಳ ನೀಡಿದ್ರು. ಕೇವಲ ನಾಲ್ಕೈದು ತಿಂಗಳಲ್ಲಿ ಸರ್ಕಾರದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ. ಇನ್ನೂ ನಾಲ್ಕುವರೆ ವರ್ಷದಲ್ಲಿ ರಾಜ್ಯದ ಹಣಕಾಸಿನ ಸ್ಥಿತಿ ಏನಾಗಬಹುದು? ಈ ಬಗ್ಗೆ ರಾಜ್ಯ ಸರ್ಕಾರ ಯೋಚನೆ ಮಾಡುತ್ತಿಲ್ಲ, ಉತ್ತರಿಸುತ್ತಿಲ್ಲ. ಗ್ಯಾರಂಟಿ ಹಿಡ್ಕೊಂಡು ರಾಜ್ಯ ಸರ್ಕಾರ ಕರ್ನಾಟಕವನ್ನು ಬರ್ಬಾದ್ ಮಾಡುವ ದಿಕ್ಕಿನಲ್ಲಿ ಸಾಗ್ತಿದೆ ಎಂದು ಕಿಡಿಕಾರಿದ್ದಾರೆ.